Updated on: Mar 28, 2022 | 4:22 PM
ಸೀರೆ ಎಂದರೆ ಹೆಣ್ಣುಮಕ್ಕಳಿಗೆ ಪಂಚಪ್ರಾಣ. ಸೆಲೆಬ್ರಿಟಿ ಆದರೂ ಸರಿ, ಜನ ಸಾಮಾನ್ಯರಾದರೂ ಸರಿ, ಸೀರೆಯ ಸೊಬಗಿಗೆ ಮನಸೋಲದವರೇ ಇಲ್ಲ ಎನ್ನಬಹುದು. ಕನ್ನಡ ಚಿತ್ರರಂಗದ ಖ್ಯಾತ ನಟಿ ಆಶಿಕಾ ರಂಗನಾಥ್ ಅವರಿಗೂ ಸೀರೆಗಳ ಬಗ್ಗೆ ವಿಶೇಷ ಒಲವು. ಆ ಕುರಿತು ಅವರು ಮಾತನಾಡಿದ್ದಾರೆ.
ಭಾರತದ ಸಂಪ್ರದಾಯದಲ್ಲಿ ಸೀರೆಗಳಿಗೆ ಮಹತ್ವದ ಸ್ಥಾನ ಇದೆ. ಮದುವೆ, ಹಬ್ಬ-ಹರಿದಿನಗಳಂತಹ ಯಾವುದೇ ವಿಶೇಷ ಸಂದರ್ಭಗಳಲ್ಲೂ ಮಹಿಳೆಯರ ಮೊದಲ ಆಯ್ಕೆ ಸೀರೆಯೇ ಆಗಿರುತ್ತದೆ. ಆಶಿಕಾ ರಂಗನಾಥ್ ಅವರು ಬೆಂಗಳೂರಿನಲ್ಲಿ ಇತ್ತೀಚೆಗೆ ಹೊಸ ಸೀರೆ ಮಳಿಗೆಯಲ್ಲಿ ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.
‘ಎಲ್ಲ ಹುಡುಗಿಯರಿಗೂ ಸೀರೆ ಎಂದರೆ ಒಂದು ಸಂಭ್ರಮವೇ ಸರಿ. ಇಲ್ಲಿ ಇರುವ ಹಲವು ಬಗೆಯ ವಿನ್ಯಾಸದ ಸೀರೆಗಳನ್ನು ನೋಡುವುದು ಕಣ್ಣಿಗೆ ಹಬ್ಬ. ನನಗೂ ಸೀರೆ ಎಂದರೆ ಸಖತ್ ಇಷ್ಟ’ ಎಂದು ಆಶಿಕಾ ರಂಗನಾಥ್ ಹೇಳಿದ್ದಾರೆ.
‘ಮಾರ್ಡನ್ ಆದರೂ ಸರಿ, ಟ್ರಡಿಷನಲ್ ಆದರೂ ಸರಿ, ಎಲ್ಲ ಸಂದರ್ಭದಲ್ಲೂ ಸೀರೆ ಧರಿಸುತ್ತೇವೆ. ಇದು ತುಂಬ ಸುಂದರವಾದದ್ದು. ಒಂದು ಹೆಣ್ಣನ್ನು ಬಹಳ ಚೆನ್ನಾಗಿ ಡಿಫೈನ್ ಮಾಡುವುದೇ ಸೀರೆ’ ಎಂದಿದ್ದಾರೆ ಆಶಿಕಾ. ಸೀರೆ ಧರಿಸಿ ಅನೇಕ ಫೋಟೋಗಳನ್ನು ಅವರು ಈ ಮೊದಲು ಕೂಡ ಪೋಸ್ಟ್ ಮಾಡಿದ್ದುಂಟು.
ಆಕರ್ಷಕವಾದ ಸೀರೆ ಧರಿಸಿದ ಆಶಿಕಾ ರಂಗನಾಥ್ ಅವರು ಮಿರಿಮಿರಿ ಮಿಂಚಿದರು. ಜೊತೆಗಿದ್ದ ಬೆಡಗಿಯರ ಜೊತೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಾಕಷ್ಟು ಸಿನಿಮಾಗಳಲ್ಲಿ ಆಶಿಕಾ ಬ್ಯುಸಿ ಆಗಿದ್ದಾರೆ. ‘ಮದಗಜ’, ‘ರ‍್ಯಾಂಬೊ 2’ ಮುಂತಾದ ಸಿನಿಮಾಗಳಿಂದ ಅವರ ಖ್ಯಾತಿ ಹೆಚ್ಚಿದೆ.
ಸೀರೆಯ ಸೊಬಗಿಗೆ ಮನಸೋತ ಆಶಿಕಾ ರಂಗನಾಥ್