75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿ ಸಜಾಬಂಧಿ ಕೈದಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಇತ್ತೀಚಿಗಷ್ಟೇ ದೇಶದಾದ್ಯಂತ ಆಚರಿಸಿದ ಸ್ವಾಂತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸ್ಮರಣಾರ್ಥ ಜೈಲುಹಕ್ಕಿಗಳಿಗೂ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಪರಪ್ಪನ ಅಗ್ರಹಾರದ ಕೇಂದ್ರ ಜೈಲಿನ ಕೈದಿಗಳಿಗೆ ಜೈಲು ಅಧಿಕಾರಿಗಳು ಚಿತ್ರಕಲೆ, ಗಾಯನ ಸೇರಿದಂತೆ ಹಲವಾರು ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ವಿವಿಧ ಪ್ರಕರಣಗಳಲ್ಲಿ ಕಾರಾಗೃಹ ಸೇರಿರುವ ಕೈದಿಗಳು ತಮಗಾಗಿಯೇ ಏರ್ಪಡಿಸಿದ್ದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಜೈಲುಹಕ್ಕಿಗಳು ಉತ್ಸಾಹದಿಂದ ಚಿತ್ರ ಬರೆದರು. ಹಾಡಿದರು. ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದರು. ಜತೆಗೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನೂ ಘೋಷಿಸಲಾಯಿತು.
ಚಿತ್ರಕಲಾ ಸ್ಪರ್ಧೆಗಳಲ್ಲಿ ಒಟ್ಟು 42 ಕೈದಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಕೈದಿಗಳು ಬಿಡಿಸಿದ ವಿಭಿನ್ನ ಚಿತ್ರಗಳು ಜೈಲಿನ ಅಧಿಕಾರಿಗಳನ್ನೂ ಅಚ್ಚರಿಗೊಳಿಸಿತು.
ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ನೈಜೇರಿಯಾ ದೇಶದ ಪ್ರಜೆಗಳೂ ಕೂಡ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು. ಇತರ ಸಜಾಬಂಧಿ ಕೈದಿಗಳ ಜತೆ ಜೈಲುವಾಸ ಅನುಭವಿಸುತ್ತಿರುವ ನೈಜೀರಿಯನ್ ಪ್ರಜೆಗಳೂ ಕೂಡ ಸಹಜವಾಗಿಯೇ ಭಾಗಿಯಾಗಿದ್ದರು.
ಡಾ. ಬಿ.ಆರ್.ಅಂಬೇಡ್ಕರ್ ಅವರ ಚಿತ್ರ ಬಿಡಿಸಿ ಸಂವಿಧಾನದ ಬಗ್ಗೆ ಬರೆದಿದ್ದ ಮಹಿಳಾ ಕೈದಿಗೆ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆಯಿತು. ಐಜಿಪಿ ನಂಜುಂಡಸ್ವಾಮಿ ಚಿತ್ರಗಳನ್ನು ವೀಕ್ಷಿಸಿ ಬಹುಮಾನ ವಿತರಿಸಿದರು.
ಭಾರತ ಮಾತೆ, ಡಾ.ಬಿ ಆರ್ ಅಂಬೇಡ್ಕರ್, ಪರಿಸರ, ಗಾಂಧೀಜಿ, ಬುದ್ದ, ವಿಷ್ಣು, ಕೃಷ್ಣ ,ಬಾಲಕೃಷ್ಣ, ಹಳ್ಳಿ ಪರಿಸರ ಸೇರಿದಂತೆ ಅನೇಕ ಸುಂದರ ಚಿತ್ರಗಳನ್ನು ಕೈದಿಗಳು ಚಿತ್ರಿಸಿದ್ದರು.
Published On - 9:03 pm, Sun, 22 August 21