
ಇಷ್ಟು ದಿನ ಬಾಗಲಕೋಟೆ ಜಿಲ್ಲೆಯಲ್ಲಿ ಬಿಸಿಲು ಜನರನ್ನು ಹೈರಾಣಾಗಿಸಿತ್ತು. ಮನೆ ಬಿಟ್ಟು ಹೊರ ಬರಲು ಜನ ಹಿಂದೇಟು ಹಾಕ್ತಿದ್ದರು. ನದಿ-ಕೆರೆಗಳು ಖಾಲಿಯಾಗಿದ್ದವು. ಬರದ ಚಿತ್ರಣ ಎಲ್ಲೆಡೆ ಇತ್ತು. ಆದರೆ ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದೆ. ಇದರಿಂದ ಬತ್ತಿದ ನದಿಗಳು ಭರ್ತಿಯಾದರೆ, ಜಲಪಾತಗಳಿಗೆ ಜೀವಕಳೆ ಬಂದಿದೆ.

ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ದಮ್ಮೂರು ಫಾಲ್ಸ್ ಧುಮ್ಮುಕ್ಕುತ್ತಿದೆ. ಬೆಟ್ಟದಿಂದ ಗಿಡಮರಗಳ ಮಧ್ಯದಿಂದ ಧುಮ್ಮುಕ್ಕುವ ಜಲಧಾರೆ ಕಡು ಪ್ರವಾಸಿಗರು ಖುಷ್ ಆಗಿದ್ದಾರೆ. ಜಲಧಾರೆಯಲ್ಲಿ ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸುತ್ತಿದ್ದಾರೆ. ಜಲಧಾರೆಯಲ್ಲಿ ಮಕ್ಕಳು, ಯುವಕರು, ಮಹಿಳೆಯರು ಮೈಯೊಡ್ಡಿ ಎಂಜಾಯ್ ಮಾಡುತ್ತಿದ್ದಾರೆ. ಬೆಟ್ಟದಿಂದ ಧುಮ್ಮುಕುವ ದಮ್ಮೂರು ಫಾಲ್ಸ್ ನೋಡುವುದೇ ಕಣ್ಣಿಗೆ ಹಬ್ಬ.

ಇದು ಕೇವಲ ಜಲಧಾರೆಯಲ್ಲ. ಇದರ ಪ್ರತಿ ಹನಿ ಔಷಧಿ ಎಂಬ ನಂಬಿಕೆ ಜನರಲ್ಲಿದೆ. ಏಕೆಂದರೆ ಈ ಫಾಲ್ಸ್ ಬೃಹತ್ ಬೆಟ್ಟದ ಮೇಲಿಂದ ದುಮುಕುತ್ತದೆ. ಬೆಟ್ಟದ ಮೇಲೆ ಔಷಧಿ ಗಿಡಗಳಿದ್ದು, ಔಷಧಿ ಗಿಡಮರಗಳ ಬೇರಿನಿಂದ ಹರಿದು ಬರುವ ಜಲಧಾರೆಯಲ್ಲಿ ಔಷಧಿ ಗುಣ ಇದೆ. ಚರ್ಮರೋಗ, ಮೈ-ಕೈ ನೋವು ಇದ್ದರೂ ಈ ಜಲಧಾರೆಗೆ ಮೈಯೊಡ್ಡಿದರೆ ವಾಸಿಯಾಗುತ್ತದೆ ಎಂಬ ನಂಬಿಕೆಯಿದೆ.

ಕೇವಲ ಮಜಾ ನೀಡುವ ಜಲಧಾರೆ ಮಾತ್ರವಲ್ಲ ಇದು ಚಿಕಿತ್ಸೆ ಪಾಲ್ಸ್ ಎಂದು ಜನ ಕರೆಯುತ್ತಾರೆ. ಜಲಧಾರೆ ಪಕ್ಕದಲ್ಲಿ ದಿಡಗಿನ ಬಸವೇಶ್ವರ ದೇವಸ್ಥಾನವಿದ್ದು, ಫಾಲ್ಸ್ ಮೋಜು ಮಸ್ತಿ ನಂತರ ಜನರು ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಕೂಡ ಪಡೆದು ಹೋಗುತ್ತಾರೆ.

ಒಟ್ಟಿನಲ್ಲಿ ನಿರಂತರ ಮಳೆಯಿಂದ ಜಲಮೂಲಗಳಿಗೆ ಜೀವಕಳೆ ಬಂದಿದೆ. ಜಲಪಾತಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ದಮ್ಮೂರು ಫಾಲ್ಸ್ ಪ್ರವಾಸಿಗರಿಗೆ ಒನ್ ಡೆ ಪಿಕ್ ನಿಕ್ಗೆ ಹೇಳಿ ಮಾಡಿಸಿದ ತಾಣವಾಗಿದ್ದು, ಎಲ್ಲರೂ ಹೋಗಿ ಎಂಜಾಯ್ ಮಾಡಬಹುದಾಗಿದೆ.
Published On - 7:48 pm, Fri, 23 May 25