Updated on: Nov 21, 2022 | 9:16 AM
ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿಯದ್ದೇ ದರ್ಬಾರ್. ಬಸವನ ಪರಿಷೆಯಲ್ಲಿ ಬಡವರ ಬಾದಾಮಿಯದ್ದೇ ಘಮ.
ಜನರ ಕೈಯಲ್ಲಿ, ಬಾಯಲ್ಲಿ, ರಸ್ತೆಯಲ್ಲಿ.. ಹೀಗೆ ಬಸವನಗುಡಿಯಲ್ಲಿ ಎಲ್ ನೋಡಿದ್ರೂ ಕಳ್ಳೇಕಾಯ್ದೇ ದರ್ಬಾರ್. ರಾಜಧಾನಿಯ ಐತಿಹಾಸಿಕ ಹಬ್ಬ ಬಸವನಗುಡಿಯ ಕಡಲೆಕಾಯಿ ಪರಿಷೆ ಶುರುವಾಗಿದೆ. ಹೀಗಾಗಿ ದೊಡ್ಡಗಣಪತಿ ದೇವಸ್ಥಾನದ ಸುತ್ತಮುತ್ತ ಜಾತ್ರೆಯ ವಾತಾವರಣ ಮನೆ ಮಾಡಿದೆ.
ಪರಿಷೆ ಹಿನ್ನೆಲೆಯಲ್ಲಿ ದೊಡ್ಡ ಗಣೇಶನಿಗೆ ಕಡಲೆಕಾಯಿಯಲ್ಲೇ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಪೂಜೆಯನ್ನ ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದುಬಂದಿತ್ತು. ಜನಸಂಖ್ಯೆ ಹೆಚ್ಚಾಗಿದ್ದರಿಂದ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು.
ದೊಡ್ಡ ಬಸವಣ್ಣನ ದೇವಸ್ಥಾನ ಪಕ್ಕದಲ್ಲಿ ಹಳ್ಳಿಯ ಸೊಗಡಿನಲ್ಲಿ ಪಾರ್ಕ್ ನಿರ್ಮಾಣ ಮಾಡ್ಲಾಗಿದೆ. ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಕ್ಕಾಗಿ ಆಂಧ್ರ, ತಮಿಳುನಾಡು, ರಾಮನಗರ, ಕೋಲಾರ, ಚಿತ್ರದುರ್ಗ ಸೇರಿದಂತೆ ಹಲವೆಡೆಯಿಂದ 3 ಸಾವಿರಕ್ಕೂ ಹೆಚ್ಚು ವ್ಯಾಪಾರಸ್ಥರು ಬಂದಿದ್ದಾರೆ.
ಇಲ್ಲಿ 500 ಅಂಗಡಿಗಳು ರೈತರದ್ದೇ ಆಗಿವೆ. ಜಾತ್ರೆಯಲ್ಲಿ ಹಸಿ ಕಡಲೆಕಾಯಿ, ಹುರಿದ ಕಡಲೆಕಾಯಿ, ಬೇಸಿದ ಕಡಲೆಕಾಯಿ ಜನರ ಬಾಯಲ್ಲಿ ನೀರೂರಿಸುತ್ತಿದೆ. ಆದ್ರೆ ಈ ವರ್ಷ ಹೆಚ್ಚು ಮಳೆಯಾದಂತಹ ಪರಿಣಾಮ ಕಡಲೆಕಾಯಿ ಬೆಲೆಯೂ ಜಾಸ್ತಿಯಾಗಿದೆ.
ಕಡಲೆಕಾಯಿ ಪರಿಷೆಗೆ 15 ಅಡಿ ಎತ್ತರ 20 ಅಡಿ ಉದ್ದದ ದೊಡ್ಡ ಬಸವ ಹೂಗಳಿಂದ ಅಲಂಕೃತನಾಗಿದ್ದ. ಇದನ್ನು ಕಣ್ತುಂಬಿಕೊಳ್ಳಲು ಬುಲ್ ಟೆಂಪಲ್ಗೆ ಭಕ್ತ ಸಾಗರವೇ ಹರಿದು ಬಂತು,
ಕಡಲೆಕಾಯಿ ಪರಿಷೆ ಹಿನ್ನೆಲೆ ದೊಡ್ಡ ಗಣಪತಿ ದೇವಸ್ಥಾನ, ಬುಲ್ ಟೆಂಪಲ್ ಸೇರಿದಂತೆ ಪ್ರಮುಖ ದೇವಾಲಯ, ಬೀದಿಗಳು ಘಮ ಘಮಿಸುವ ಹೂಗಳಿಂದ ಕಂಗೊಳಿಸುತ್ತಿವೆ.
ಬಸವನಗುಡಿಯ ಐತಿಹಾಸಿಕ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಂಭ್ರಮ ಮನೆ ಮಾಡಿದೆ. ಕಡಲೆಕಾಯಿ ಅಭಿಷೇಕದ ನಂತರ ಹೂಗಳಿಂದ ಅಲಂಕಾರನಾದ ಗಣಪತಿಯ ದರ್ಶನ ಅದ್ದದ್ದು ಹೀಗೆ.
ಕಡ್ಲೇಕಾಯ್ ಘಮ ಅಂದ್ರೆನೆ ಹಾಗೇ.. ಒಮ್ಮೆ ತಿನ್ನೋಕ್ ಶುರು ಮಾಡಿದ್ರೆ ತಿಂತಾನೇ ಇರ್ಬೇಕು ಅನ್ಸುತ್ತೆ. ನೀವ್ ಕೂಡ ಬಡವರ ಬಾದಾಮಿ ಪ್ರಿಯರಾಗಿದ್ರೆ ಬಸವನಗುಡಿಗೆ ಹೋಗೋದನ್ನ ಮಿಸ್ ಮಾಡ್ಬೇಡಿ.
Published On - 9:16 am, Mon, 21 November 22