Bengaluru Kambala: ಬೆಂಗಳೂರು ಕಂಬಳದ ಇಂದಿನ ಝಲಕ್ ಫೋಟೋಗಳಲ್ಲಿ ನೋಡಿ
ಇತಿಹಾಸದಲ್ಲೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ಕಂಬಳ ಪಂದ್ಯ ಆಯೋಜಿಸಲಾಗಿದೆ. ಇಂದು ಮತ್ತೆ ನಾಳೆ ಎರಡು ದಿನ ಬೆಂಗಳೂರಿನಲ್ಲಿರುವ ತುಳುಭಾಷಿಕರಿಗೆ ಹಾಗೂ ನಗರವಾಸಿಗಳು ಕೋಣಗಳ ಗತ್ತಿನ ಓಟವನ್ನು ಕಣ್ತುಂಬಿಕೊಳ್ಳಬಹುದು. ಹಾಗಾದರೆ, ಕಂಬಳದ ಮೊದಲ ದಿನವಾದ ಇಂದು ಹೇಗಿತ್ತು? ಇದರ ಝಲಕ್ ಫೋಟೋಗಳಲ್ಲಿ ನೋಡಿ.
1 / 11
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಂಗಳೂರು ಕಂಬಳಕ್ಕೆ ಚಾಲನೆ ನೀಡಲಾಗಿದೆ. ನಾಳೆ ಮುಕ್ತಾಯಗೊಳ್ಳಲಿದೆ. ಈ ಎರಡು ದಿನ ಬೆಂಗಳೂರಿನಲ್ಲಿರುವ ತುಳುಭಾಷಿಕರಿಗೆ ಹಾಗೂ ನಗರವಾಸಿಗಳು ಕೋಣಗಳ ಗತ್ತಿನ ಓಟವನ್ನು ಕಣ್ತುಂಬಿಕೊಳ್ಳಬಹುದು.
2 / 11
ದಿವಂಗತ ನಟ ಡಾ.ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ಚಿನಿ ಪುನೀತ್ ರಾಜ್ಕುಮಾರ್ ಅವರು ಕಂಬಳದ ಕೆರೆಗೆ ಚಾಲನೆ ನೀಡಿದರು. ಈ ವೇಳೆ ಕೇಂದ್ರಸಚಿವೆ ಶೋಭಾ ಕರಂದ್ಲಾಜೆ ಕೂಡ ಜೊತೆಗಿದ್ದರು.
3 / 11
ಕಂಬಳ ಕೆರೆಗೆ ಪೂಜೆಯೂ ನೆರವೇರಿಸಲಾಯಿತು. ಪುತ್ತೂರಿನ ಶಾಸಕರೂ ಆಗಿರುವ ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ರೈ, ಕೇಂದ್ರಸಚಿವೆ ಶೋಭಾಕರಂದ್ಲಾಜೆ ಇದ್ದರು.
4 / 11
ಬೆಳಗ್ಗಿನ ಸಭಾ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ವೇಳೆ ಶಾಸಕ ಅಶೋಕ್ ರೈ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಗೀತ ನಿರ್ದೇಶಕ ಗುರುಕಿರಣ್, ಸಂಸದ ಪಿಸಿ ಮೋಹನ್, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ, ಅಶ್ಚಿನಿ ಪುನೀತ್ ರಾಜ್ಕುಮಾರ್ ಸೇರಿದಂತೆ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.
5 / 11
ಕಂಬಳದ ಕೆರೆಯಲ್ಲಿ ಕೋಣಗಳ ಗತ್ತಿನ ಓಟ ಶುರುವಾಗಿದೆ. ಭರ್ಜರಿ ಪೈಪೋಟಿಯೂ ಏರ್ಪಟ್ಟಿದೆ. ಆರಂಭದಲ್ಲಿ ಕೋಣಗಳ ಪ್ರಾಯೋಗಿಕ ಓಟ ನಡೆಸಲಾಯಿತು. ಬಳಿಕ ಜಿದ್ದಾಜಿದ್ದಿನ ಕೋಣಗಳ ಸ್ಪರ್ಧೆ ಆರಂಭವಾಯಿತು.
6 / 11
ಕಂಬಳದ ಕೆರೆಗಳಿಗೆ ರಾಜ, ಮಹರಾಜ ಎಂದು ನಾಮಕರಣ ಮಾಡಲಾಗಿದೆ. ಈ ಕಂಬಳದಲ್ಲಿ 178ಕ್ಕೂ ಹೆಚ್ಚು ಕೋಣಗಳ ಜೋಡಿ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿವೆ. ಈ ಪೈಕಿ ತಾಟೆ ಸೇರಿದಂತೆ 100ಕ್ಕೂ ಹೆಚ್ಚು ಕೋಣಗಳು ಈ ಹಿಂದೆ ಪ್ರಶಸ್ತಿ, ಮೆಡಲ್ಗಳನ್ನು ಗೆದ್ದಿವೆ.
7 / 11
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಕಂಬಳ ವೀಕ್ಷಣೆ ಮಾಡುವವರಿಗೆ ಕೇಲವ ಕೋಣಗಳ ಓಟಗಳನ್ನು ಮಾತ್ರವಲ್ಲ, ಕರಾವಳಿ ಭಾಗದ ಪ್ರಾಚೀನ ವಸ್ತುಗಳನ್ನು ಕೂಡ ನೋಡಬಹುದು. ಹೌದು, ಮೈದಾನದಲ್ಲಿ ವಸ್ತುಪ್ರದರ್ಶನವನ್ನೂ ಮಾಡಲಾಗುತ್ತಿದ್ದು, ಸಾವಿರಾರು ಜನರು ವಸ್ತುಗಳನ್ನು ವೀಕ್ಷಣೆ ಮಾಡಿ ಅಚ್ಚರಿಗೊಳಗಾದರು.
8 / 11
ಅದೇ ರೀತಿ, ಕರಾವಳಿ ಭಾಗದಲ್ಲಿ ನಾಗಾರಾಧನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಇದರ ಡೆಮೋ ಕೂಡ ಇಡಲಾಗಿದೆ. ಕಟ್ಟೆಯೊಂದರಲ್ಲಿ ನಾಗನ ವಿಗ್ರಹಗಳ ಮಾದರಿಯನ್ನು ಇಡಲಾಗಿದೆ.
9 / 11
ಅಲ್ಲದೆ, ಕರಾವಳಿ ಭಾಗದಲ್ಲಿ ದೈವಾರಾಧನೆಯನ್ನು ಕೂಡ ಕಾಣಬಹುದು. ಯಾವ ರೀತಿ ದೇವರನ್ನು ನಂಬುತ್ತಾರೋ ಅಷ್ಟೇ ಭಯಭಕ್ತಿಯಲ್ಲಿ ದೈವಗಳನ್ನು ಕೂಡ ಆರಾಧಿಸಲಾಗುತ್ತದೆ. ಇದರ ಡೆಮೋ ಕೂಡ ಅರಮನೆ ಮೈದಾನದಲ್ಲಿ ಇಡಲಾಗಿದೆ.
10 / 11
ಹುಲಿವೇಷದ ಕುಣಿತ ಕರಾವಳಿಯ ನಾಡಿಮಿಡಿತವಾಗಿದೆ. ನವರಾತ್ರಿ ಸಮಯದಲ್ಲಿ ಕರಾವಳಿ ಭಾಗದಲ್ಲಿ ಈ ಹುಲಿವೇಷಗಳನ್ನು ಕಾಣಬಹುದು. ಮನೆಮನೆಗಳಿಗೆ, ಅಂಗಡಿಗಳಿಗೆ ತೆರಳಿ ಕುಣಿಯಲಾಗುತ್ತದೆ. ಇದನ್ನು ಈಗ ಬೆಂಗಳೂರು ಕಂಬಳದಲ್ಲೂ ಕಾಣಬಹುದು. ಹೌದು, ಮೈದಾನದಲ್ಲಿ ಹುಲಿ ವೇಷಧಾರಿಗಳು ಕುಣಿದು ಜನರನ್ನು ಮನರಂಜಿಸುತ್ತಿದ್ದಾರೆ.
11 / 11
ಸಂಜೆ ನಡೆದ ಮುಖ್ಯ ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿದರು. ಈ ವೇಳೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಉಪಸ್ಥಿತರಿದ್ದರು.
Published On - 8:54 pm, Sat, 25 November 23