
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಾಶೆಂಪುರ ಗ್ರಾಮದ ರೈತ ಹತ್ತಾರು ವರ್ಷದಿಂದ ಸೋಯಾಬೀನ್, ತೊಗರಿ, ಉದ್ದು ಹೀಗೆ ಬೆಳೆ ಬೆಳೆದು ಹೈರಾಣಾಗಿದ್ದರು. ಆದರೆ ಈ ಆಧುನಿಕ ಯುಗದಲ್ಲಿ ಕೃಷಿಯಲ್ಲಿ ಏನಾದರೂ ಹೊಸದನ್ನ ಮಾಡಬೇಕೆಂದು ಯೋಚಿಸಿ ತನ್ನ ಹೊಲದಲ್ಲಿ ನಿಂಬೆ ಬೆಳೆದು ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. ಆ ಮೂಲಕ ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಮಾತನ್ನು ಅಕ್ಷರಶಃ ಸತ್ಯ ಮಾಡಿದ್ದಾರೆ.

ಇಂತಹ ರೈತರ ಸಂಕಷ್ಟದ ನಡುವೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಾಶೆಂಪುರ ಗ್ರಾಮದ ಪ್ರಗತಿಪರ ರೈತರ ರಾಮ್ ರೆಡ್ಡಿ, ಕೃಷಿಯಿಂದಲೇ ವಾರ್ಷಿವಾಗಿ ಲಕ್ಷ ಲಕ್ಷ ಆದಾಯವನ್ನು ಸಂಪಾದಿಸುತ್ತಿದ್ದಾರೆ. ಇವರದ್ದು ಒಟ್ಟು 12 ಎಕರೆಯಷ್ಟು ಜಮೀನಿದ್ದು, ಒಂದೂವರೆ ಎಕರೆಯಲ್ಲಿ ಕಾಗಜಿ 12-ಅನ್ನೋ ತಳಿಯ ನಿಂಬೆ ಬೆಳೆಯುತ್ತಿದ್ದಾರೆ.

ಕೋವಿಡ್ನ ಲಾಕ್ಡೌನ್ ಸಮಯದಲ್ಲಿ ನಿಂಬೆ ಗಿಡಗಳನ್ನ ನಾಟಿ ಮಾಡಿ ಎರಡು ವರ್ಷದ ಬಳಿಕ ನಿಂಬೆ ಹಣ್ಣು ಕೊಡುತ್ತಿದೆ. ಎಲ್ಲಾ ಖರ್ಚು ತೆಗೆದು ವರ್ಷಕ್ಕೆ ನಮಗೆ ಐದಾರು ಲಕ್ಷ ರೂ ಲಾಭವಾಗುತ್ತದೆ ಎಂದು ರಾಮ್ ರೆಡ್ಡಿ ಹೇಳುತ್ತಾರೆ.

ನಿಂಬೆ ಹೆಚ್ಚು ಲಾಭದಾಯಕ ಕೃಷಿ ಎಂದು ಅರಿತುಕೊಂಡ ರಾಮ್ ರೆಡ್ಡಿ, ತನ್ನ ಒಂದೂವರೆ ಎಕರೆಯಷ್ಟು ಜಮೀನಿನಲ್ಲಿ ನಿಂಬೆ ನಾಟಿ ಮಾಡಿದ್ದಾರೆ. ಒಂದೂವರೆ ಎಕರೆಯಲ್ಲಿ ಸುಮಾರು 360 ನಿಂಬೆ ಗಿಡಗಳನ್ನು ಹಚ್ಚಿದ್ದಾರೆ. ಕಳೆದ ಮೂರು ವರ್ಷದಿಂದ ಒಂದು ನಿಂಬೆ ಗಿಡ ಸರಾಸರಿ 40 ರಿಂದ 60 ಕೆ.ಜಿ ವರೆಗೆ ನಿಂಬೆ ಕೊಡುತ್ತಿದೆ.

ನಿಂಬೆ ಗಿಡಗಳು ನಾಟಿ ಮಾಡಿದ 12 ವರ್ಷದವರೆಗೆ ಹಣ್ಣು ಕೊಡುತ್ತದೆ. ಆಮೇಲೆ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ, ಹೀಗಾಗಿ 12 ವರ್ಷ ಆದ ಮೇಲೆ ನಿಂಬೆ ಗಿಡಗಳನ್ನ ತೆಗೆದು ಮತ್ತೆ ಬೇರೆ ನಿಂಬೆ ಸಸಿ ನಾಟಿ ಮಾಡಲಾಗುತ್ತದೆ. ಈಗ ಒಂದೂವರೆ ಎಕರೆಯಷ್ಟು ನಿಂಬೆ ನಾಟಿ ಮಾಡಿ ಐದು ವರ್ಷ ಕಳೆದಿದ್ದು, ಹೀಗಾಗಿ ಮತ್ತೆ ಎರಡು ಎಕರೆ ಈ ವರ್ಷ ನಿಂಬೆ ನಾಟಿ ಮಾಡಿದ್ದಾರೆ.

ವಾತಾವರಣಕ್ಕೆ ಅನುಗುಣವಾಗಿ ನಿಂಬೆ ದರ ನಿಗದಿಯಾಗುತ್ತದೆ. ಚಳಗಾಲಕ್ಕೆ ಹೋಲಿಸಿದರೆ ಬೆಸಿಗೆಯಲ್ಲಿ ಇದರ ಬೆಲೆ ಹೆಚ್ಚು. ಜೊತೆಗೆ ವಾರದಿಂದ ವಾರಕ್ಕೆ ದರ ಏರಿಳಿತವಾಗುವ ಕಾರಣಕ್ಕೆ ತೋಟಗಾರಿಕೆ ಇಲಾಖೆಯ ಸಹಾಯ ಪಡೆದುಕೊಂಡು 60 ಟನ್ ನಷ್ಟು ನಿಂಬೆ ಸ್ಟೋರೇಜ್ ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಯಾವಾಗ ದರ ಹೆಚ್ಚಿಗೆ ಇರುತ್ತದೆಯೋ ಅಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಒಟ್ಟಿನಲ್ಲಿ ರೈತ ರಾಮ್ ರೆಡ್ಡಿ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.