
ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಅಂತ ಹೇಳ್ತಾರೆ. ಆದ್ರೂ ಕೂಡ ಕೆಲವೊಂದು ಬಾರಿ ಈ ಜಗಳಗಳು ಅತಿರೇಕಕ್ಕೆ ತಿರುಗಿ ಸಂಸಾರದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಹೀಗೆ ವೈವಾಹಿಕ ಜೀವನದಲ್ಲಿ ತಿಳಿದೋ, ತಿಳಿಯದೆಯೋ ಕೆಲವೊಂದು ತಪ್ಪುಗಳಾಗುತ್ತವೆ. ಹಾಗಿರುವಾಗ ಹೆಂಡತಿಯಾದವಳಲ್ಲಿ ಈ ಕೆಲವೊಂದು ಗುಣಗಳಿದ್ದರೆ ದಾಂಪತ್ಯ ಜೀವನ ಎನ್ನುವಂತಹದ್ದು ಸುಖಮಯವಾಗಿರುತ್ತದೆ ಎಂದು ಚಾಣಕ್ಯರು ಹೇಳ್ತಾರೆ.

ಪ್ರೋತ್ಸಾಹ: ಹೆಂಡತಿಯಾದವಳಿಗೆ ತನ್ನ ಗಂಡನನ್ನು ಪ್ರೋತ್ಸಾಹಿಸುವ ಗುಣವಿರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಗಂಡನ ಸೋಲುಗಳಲ್ಲಿ ಜೊತೆಯಾಗಿ ನಿಲ್ಲುವ, ಗೆಲುವನ್ನು ಸಂಭ್ರಮಿಸುವ ಗುಣವಿರಬೇಕು. ಪ್ರತಿಯೊಂದು ಹಂತದಲ್ಲೂ ಪ್ರೋತ್ಸಾಹ ನೀಡುವ ಹೆಂಡತಿಯಿದ್ದರೆ ಗಂಡನಾದವನು ಖಂಡಿತವಾಗಿಯೂ ಯಶಸ್ಸು ಸಾಧಿಸುತ್ತಾನೆ ಎಂದು ಹೇಳುತ್ತಾರೆ ಚಾಣಕ್ಯ.

ತಾಳ್ಮೆ: ಹೆಂಡತಿಯಾದವಳಿಗೆ ತಾಳ್ಮೆ ಇರಬೇಕು. ತಾಳ್ಮೆಯಿಂದ ಇರುವ ಹೆಂಡಿತಿರು ಸುಖಾ ಸುಮ್ಮನೆ ಗಂಡನೊಂದಿಗೆ ಜಗಳವಾಡುವುದಿಲ್ಲ. ಪ್ರತಿಯೊಂದು ವಿಚಾರವನ್ನು ತಾಳ್ಮೆಯಿಂದ ಅರ್ಥೈಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹೀಗೆ ಹೆಂಡತಿಗೆ ಈ ಗುಣವಿದ್ದರೆ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.

ಬುದ್ಧಿವಂತಿಕೆ: ಹೆಂಡತಿಯಾದವಳು ಬುದ್ಧಿವಂತಳಾಗಿರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಇದರರ್ಥ ಆಕೆ ಔಪಚಾರಿಕ ಶಿಕ್ಷಣವನ್ನು ಪಡೆದಿರಬೇಕೆಂದಲ್ಲ. ಅಂದರೆ ಆಕೆ ಜೀವನದ ಸಂಕೀರ್ಣತೆಗಳನ್ನು ನಿಭಾಯಿಸುವ, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು. ಇಂತಹ ಬುದ್ಧಿವಂತ ಹೆಂಡತಿಯಿದ್ದರೆ ದಾಂಪತ್ಯ ಜೀವನ ಸುಂದರವಾಗಿರುತ್ತದೆ.

ಹಣ ಉಳಿತಾಯ: ಹೆಂಡತಿಯಾದವಳಿಗೆ ಅನಗತ್ಯ ಖರ್ಚು ಮಾಡದೆ ಹಣವನ್ನು ಉಳಿಸುವ ಗುಣವಿರಬೇಕು ಎಂದು ಚಾಣಕ್ಯ ಹೇಳಿದ್ದಾರೆ. ಹಣವನ್ನು ಉಳಿತಾಯ ಮಾಡುವ ಬುದ್ಧಿವಂತ ಮಹಿಳೆ ಕಷ್ಟದ ಸಮಯದಲ್ಲಿ ತನ್ನ ಗಂಡ, ಕುಟುಂಬವನ್ನು ರಕ್ಷಣೆ ಮಾಡುತ್ತಾಳೆ, ತನ್ನ ಸಂಸಾರವನ್ನು ಕಷ್ಟದ ಕೂಪದಿಂದ ರಕ್ಷಿಸುತ್ತಾಳೆ.

ದಯೆ, ಸಹಾನುಭೂತಿ: ಹೆಂಡತಿಯಾದವಳಿಗೆ ದಯೆ ಮತ್ತು ಸಹಾನುಭೂತಿ ಗುಣ ಇರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಒಬ್ಬ ಆದರ್ಶ ಹೆಂಡತಿ ತನ್ನ ಗಂಡನ ಅಭಿಪ್ರಾಯಗಳನ್ನು ಗೌರವಿಸುತ್ತಾಳೆ. ಗಂಡನಿಗೆ ಚುಚ್ಚು ಮಾತುಗಳನ್ನಾಡದೆ ಗಂಡನ ಪ್ರತಿಯೊಂದು ಹೆಜ್ಜೆಯಲ್ಲೂ ಆತನಿಗೆ ಭರವಸೆಯ ಬೆಳಕಾಗಿ ನಿಲ್ಲುತ್ತಾಳೆ. ಇಂತಹ ಹೆಂಡತಿಯಿದ್ದರೆ ದಾಂಪತ್ಯ ಬಲು ಸುಂದರವಾಗಿರುತ್ತದೆ.