
ಪ್ರತಿದಿನ ಎರಡು ಸಾಮಾನ್ಯ ಚಪಾತಿಗಳನ್ನು ತಿನ್ನುವುದರಿಂದ ಅದರಲ್ಲಿ ಇರುವ ಅಧಿಕ ನಾರಿನಾಂಶದಿಂದಾಗಿ (Fibrous substances) ಹೆಚ್ಚು ಸಮಯ ಹೊಟ್ಟೆ ತುಂಬಿದಂತೆ ಇರುತ್ತದೆ. ಹೆಚ್ಚಿನ ಕಾಲ ಹಸಿವು ಆಗದಂತೆ ಮಾಡುತ್ತದೆ. ಇತರ ಆಹಾರಗಳೊಂದಿಗೆ ಹೋಲಿಸಿದರೆ ಇದರಲ್ಲಿ ಕ್ಯಾಲರಿ ಅಂಶಗಳೂ ಕಡಿಮೆಯೇ. ಆದ್ದರಿಂದ ಸುಲಭವಾಗಿ ದೇಹ ತೂಕವನ್ನು ಕಡಿಮೆ ಮಾಡಲು ನಿಮ್ಮ ಮೊದಲ ಆಯ್ಕೆ ಚಪಾತಿ ಆಗಬೇಕಾಗುತ್ತದೆ.

ಚಪಾತಿಯಲ್ಲಿರುವ ಹೆಚ್ಚಿನ ಕಬ್ಬಿಣಾಂಶವು ದೇಹದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಕ್ರಮಬದ್ಧಗೊಳಿಸುತ್ತದೆ. ಈ ಆಹಾರವು ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದುದರಿಂದಲೇ ರಕ್ತಹೀನತೆಯಿಂದ ಬಳಲುತ್ತಿರುವವರು ಚಪಾತಿಯನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದು ಉತ್ತಮ.

ಚಪಾತಿಯಲ್ಲಿ ‘ಬಿ’, ‘ಇ’ ವಿಟಮಿನ್‌ಗಳ ಜೊತೆಗೆ ಕಾಪರ್, ಜಿಂಕ್, ಅಯೋಡಿನ್, ಮಂಗನೀಸ್, ಸಿಲಿಕಾನ್, ಪೊಟಾಶಿಯಂ, ಕ್ಯಾಲ್ಷಿಯಂ.. ಮುಂತಾದ ಪದಾರ್ಥಗಳು ಪುಷ್ಕಳವಾಗಿ ದೊರೆಯುತ್ತವೆ. ಹಾಗೆಯೇ ಚಪಾತಿಯಲ್ಲಿ ಇರುವ ಪ್ರಮುಖ ಅಂಶ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದರಿಂದ ಇಡೀ ದಿನ ದೇಹ ಶಕ್ತಿಯೊಂದಿಗೆ ಉತ್ಸಾಹದಿಂದ ಇರಬಹುದು.

ಚಪಾತಿಯಲ್ಲಿರುವ ಸತು ಮತ್ತು ಇತರ ಖನಿಜಾಂಶಗಳು ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರಿಂದ ಚರ್ಮವು ಯಾವುದೇ ತೊಂದರೆಗಳಿಲ್ಲದೆ ಯೌವನದಿಂದ ಹೊಳೆಯುತ್ತದೆ.