
ಆ ರೈತ ಇರುವ ಭೂಮಿಯಲ್ಲಿ ಚಿನ್ನದ ಬೆಳೆ ತೆಗೆಯಲು ಹಗಲು ರಾತ್ರಿ ಕಷ್ಟಪಟ್ಟು ದ್ರಾಕ್ಷಿ ತೋಟ ಮಾಡಿದ್ದ. ಇನ್ನೇನು ದ್ರಾಕ್ಷಿ ಫಸಲು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಯಾರೋ ದುಷ್ಕರ್ಮಿಗಳು ದ್ರಾಕ್ಷಿ ತೋಟಕ್ಕೆ ವಾಮಾಚಾರ ಮಾಡಿಸಿದ ಆರೋಪ ಕೇಳಿ ಬಂದಿದೆ. ಇದರಿಂದ ದ್ರಾಕ್ಷಿ ಕಟಾವಿಗೆ ಯಾರು ಮುಂದೆ ಬರದಂತಾಗಿದೆ.

ದ್ರಾಕ್ಷಿ ತೋಟದಲ್ಲಿ ಮೊಟ್ಟೆಯನ್ನಿಟ್ಟು ಕ್ಷುದ್ರ ಪೂಜೆ, ಕೃಷಿಹೊಂಡದಲ್ಲಿ ಮಾಟಮಂತ್ರ, ಇದೆಲ್ಲಾ ಕಂಡು ಬಂದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ನಕ್ಕನಹಳ್ಳಿ ಗ್ರಾಮದ ರೈತ ಪ್ರಭಾಕರ್ ಎಂಬುವವರ ದ್ರಾಕ್ಷಿ ತೋಟದಲ್ಲಿ.

ಗ್ರಾಮದ ಯುವ ರೈತ ಪ್ರಭಾಕರ್, ಸಾಲ ಸೂಲ ಮಾಡಿ ಎರಡುವರೆ ಎಕರೆ ಜಮೀನಿನಲ್ಲಿ ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆದಿದ್ದಾರೆ. ಫಸಲು ಇನ್ನೇನು ಕಟಾವು ಮಾಡಬೇಕು. ಅಷ್ಟರಲ್ಲಿ ಯಾರೋ ದುಷ್ಕರ್ಮಿಗಳು ಇವರ ತೋಟದ ಮೇಲೆ ಕಣ್ಣು ಹಾಕಿದ್ದಾರೆ.

ಪರಿಣಾಮ ತೋಟದ ಮೂಲೆ ಮೂಲೆ ಸೇರಿದಂತೆ ನೀರಿನ ಸಂಪಿನಲ್ಲಿ ಮಂತ್ರಿಸಿದ ಮೊಟ್ಟೆ ಇಟ್ಟು ಪೂಜೆ ಮಾಡಿದ್ದಾರೆ. ಇದರಿಂದ ಇದು ಮಾಟಮಂತ್ರದ ಕುರುವು ಅಂತ ರೈತ ಬೇಸರ ವ್ಯಕ್ತಪಡಿಸಿದ್ದಾನೆ.

ಇನ್ನೂ ರೈತನನ್ನು ಭಯಭೀತಿಗೊಳಿಸಲು ಹಾಗೂ ವರ್ತಕರು ದ್ರಾಕ್ಷಿ ಕಟಾವಿಗೆ ಬಾರದಿರಲಿ ಎಂದು ಶತ್ರುಗಳು ಮಾಟಮಂತ್ರ ಮಾಡಿದ ಶಂಕೆ ವ್ಯಕ್ತವಾಗಿದೆ. ತೋಟದಲ್ಲಿ ಕೆಲವು ದ್ರಾಕ್ಷಿ ಗಿಡಗಳು ಒಣಗಿ ಹೋಗಿವೆ.

ತೋಟಕ್ಕೆ ಮಾಡಿದ ಮಾಟಮಂತ್ರದಿಂದ ರೈತ ಭಯಭೀತನಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ನಂದಿ ಗಿರಿಧಾಮ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.