
ವಿದ್ಯಾರ್ಥಿ ದೆಸೆಯಿಂದಲೇ ಆಧುನಿಕ ತಂತ್ರಜ್ಞಾನವನ್ನು ಕಲಿತು ಧಾರವಾಡದ ಮಾಳಮಡ್ಡಿ ಬಡಾವಣೆಯ ನಿವಾಸಿ ನೀತಿ ಕುಲಕರ್ಣಿ ಎಲ್ಲರ ಗಮನ ಸೆಳೆದಿದ್ದಾರೆ. ಕೆ.ಇ. ಬೋರ್ಡ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಇವರು, 3D ಪ್ರಿಂಟಿಂಗ್ ಪ್ರವೀಣೆ. ವಿನಾಯಕ ಹಾಗೂ ಅಂಜಲಿ ದಂಪತಿ ಮಗಳಾಗಿರೋ ಇವರು, ವಿದ್ಯಾಭ್ಯಾಸದ ಜೊತೆಗೆ ಉದ್ಯೋಗದ ದಾರಿಯನ್ನೂ ಕಂಡುಕೊಂಡು ಮಾದರಿಯಾಗಿದ್ದಾರೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ತಮ್ಮ ನಿತ್ಯದ ಅಭ್ಯಾಸಕ್ಕೆ ಪೂರಕವಾಗಿ ವಿಜ್ಞಾನ ಪ್ರಯೋಗಗಳು, ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಆದರೆ, ನೀತಿ ಕುಲಕರ್ಣಿ ತಂತ್ರಜ್ಞಾನ ಬಳಸಿಕೊಂಡು ನಿತ್ಯದ ಅಭ್ಯಾಸದ ಜೊತೆಗೆ ಆದಾಯ ಗಳಿಸುತ್ತಿದ್ದಾರೆ.

3ಡಿ ತಂತ್ರಜ್ಞಾನ ಬಳಸಿ ಮದ್ರಾಸ್ ಐಐಟಿ ಸಂಶೋಧಕರು ಒಂದಿಡೀ ಕಟ್ಟಡವನ್ನೇ ನಿರ್ಮಿಸಿರುವುದನ್ನು ಪ್ರೇರಣೆಯಾಗಿ ಪಡೆದುಕೊಂಡ ಇವರು, ಈ ತಂತ್ರಜ್ಞಾನದ ಬಗ್ಗೆ ಗೂಗಲ್ನಲ್ಲಿ ಹುಡುಕಾಟ ನಡೆಸಿದ್ದಾರೆ. 3ಡಿ ತಂತ್ರಜ್ಞಾನದ ಮೂಲಕ ನಾನು ಸಹ ಏನಾದರೂ ಮಾಡಬೇಕೆಂದು ನಿರ್ಧರಿಸಿ, 3ಡಿ ಲ್ಯಾಂಪ್ಸ್ ಹಾಗೂ ಇತರೆ ಆಕರ್ಷಕ ವಸ್ತುಗಳನ್ನು ಸಿದ್ಧಪಡಿಸಿ ಸೈ ಎನಿಸಿಕೊಂಡಿದ್ದಾರೆ.

3ಡಿ ಪ್ರಿಂಟರೊಂದನ್ನು ಖರೀದಿಸಿರುವ ನೀತಿ, ತಮ್ಮ ಮೊಬೈಲ್‌ನಲ್ಲಿನ ವಿವಿಧ ಆ್ಯಪ್ಗಳ ಸಹಾಯದಿಂದ ಲ್ಯಾಂಪ್ ಅಥವಾ ಯಾವುದಾದರೂ ವಸ್ತುವಿನ ಮೇಲೆ ಮುದ್ರಣ ಆಗುವ ಚಿತ್ರವನ್ನು ಸಂಯೋಜನೆ ಮಾಡಿ ಮುದ್ರಿಸುತ್ತಿದ್ದಾರೆ. ಈಗಾಗಲೇ ಮೂನ್ ಲ್ಯಾಂಪ್‌ಗಳ ಮೇಲೆ ಆಧ್ಯಾತ್ಮ ಗುರುಗಳು, ಕ್ರೀಡಾ ತಾರೆಗಳು, ಸಿನಿಮಾ ತಾರೆಗಳು ಸೇರಿದಂತೆ ವಿವಿಧ ಚಿತ್ರಗಳನ್ನು ಮುದ್ರಿಸಿದ್ದಾರೆ.

ಉಡುಗೊರೆ ಕೊಡಲು ಆಕರ್ಷಕ ಆಟಿಕೆ ವಸ್ತುಗಳು, ಕೀ ಚೈನ್‌ಗಳು, ಲೋಗೋ, ಮೂರ್ತಿಗಳ ನಿರ್ಮಾಣವನ್ನು ಸಹ ಈ ತ್ರಿಡಿ ಪ್ರಿಂಟರ್ ಮೂಲಕ ನೀತಿ ಅವರು ಮಾಡುತ್ತಿದ್ದಾರೆ. 18 ಸಾವಿರ ರೂ.ಗೆ 3ಡಿ ಪ್ರಿಂಟರ್ ಖರೀದಿಸಿದ್ದು, ಪ್ರಿಟಿಂಗ್ ಸಮೇತ ಒಂದು ಮೂನ್ ಲ್ಯಾಂಪ್ಗೆ 350-400 ರೂ.ವರೆಗೆ ವೆಚ್ಚವಾಗುತ್ತಿದೆ. ಇದನ್ನು 750ರಿಂದ 960 ರೂ.ವರೆಗೂ ನೀತಿ ಮಾರಾಟ ಮಾಡುತ್ತಿದ್ದಾರೆ.