
ಇಂಗ್ಲೆಂಡ್ ತಂಡಕ್ಕೆ 18 ವರ್ಷದ ಯುವ ಆಲ್ರೌಂಡರ್ ಎಂಟ್ರಿ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಬೆನ್ ಸ್ಟೋಕ್ಸ್ ನಾಯಕತ್ವದ 16 ಸದಸ್ಯರ ಬಳಗದಲ್ಲಿ 18 ವರ್ಷದ ಯುವ ಆಲ್ರೌಂಡರ್ ಕಾಣಿಸಿಕೊಂಡಿರುವುದು ವಿಶೇಷ.

ಹೌದು, ಇದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡದಲ್ಲಿ ಹದಿಹರೆಯದ ಸ್ಪಿನ್ ಬೌಲಿಂಗ್-ಆಲ್ರೌಂಡರ್ ರೆಹಾನ್ ಅಹ್ಮದ್ ಸ್ಥಾನ ಪಡೆದಿದ್ದಾರೆ. ವಿಶೇಷ ಎಂದರೆ 18ನೇ ವಯಸ್ಸಿನಲ್ಲೇ ಅವಕಾಶ ಪಡೆದಯುವ ಮೂಲಕ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಲೀಸೆಸ್ಟರ್‌ಶೈರ್ ಕೌಂಟಿ ಪರ ಆಡುತ್ತಿರುವ ರೆಹಾನ್ ತಮ್ಮ ಲೆಗ್‌ಸ್ಪಿನ್ ಬೌಲಿಂಗ್ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೆ ಕೇವಲ ಮೂರು ಪ್ರಥಮ ದರ್ಜೆ ಪಂದ್ಯಗಳಲ್ಲಿ 11 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಒಂದು ಶತಕವನ್ನೂ ಸಹ ಸಿಡಿಸಿದ್ದಾರೆ.

ಅಲ್ಲದೆ ಇಂಗ್ಲೆಂಡ್ ಟೆಸ್ಟ್ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಕೋಚ್ ಬ್ರೆಂಡನ್ ಮೆಕಲಂ ಹಾಗೂ ನಾಯಕ ಬೆನ್ ಸ್ಟೋಕ್ಸ್ ಅವರನ್ನು ಪ್ರಭಾವಿಸಿದ್ದಾರೆ. ಹೀಗಾಗಿ ಮೊಯೀನ್ ಅಲಿ ಅವರ ನಿವೃತ್ತಿಯಿಂದ ತೆರವಾಗಿದ್ದ ಆಲ್ರೌಂಡರ್ ಸ್ಥಾನದಲ್ಲಿ ರೆಹಾನ್ ಅಹ್ಮದ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ವಿಶೇಷ ಎಂದರೆ ರೆಹಾನ್ ಅಹ್ಮದ್ ಆಯ್ಕೆಯಾಗಿರುವುದು ಪಾಕಿಸ್ತಾನದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ. ಅಂದರೆ ರೆಹಾನ್ ಅವರ ಪೂರ್ವಿಕರು ಪಾಕ್ ಮೂಲದವರು. ಇದೀಗ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿರುವ ರೆಹಾನ್ ಅಹ್ಮದ್ ಪಾಕ್ ವಿರುದ್ಧವೇ ತಮ್ಮ ಕೆರಿಯರ್ ಆರಂಭಿಸುವ ವಿಶ್ವಾಸದಲ್ಲಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ಕ್ಯಾಪ್ಟನ್), ಜೇಮ್ಸ್ ಆಂಡರ್ಸನ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಕೀಟನ್ ಜೆನ್ನಿಂಗ್ಸ್, ಜ್ಯಾಕ್ ಲೀಚ್, ಲಿಯಾಮ್ ಲಿವಿಂಗ್ಸ್ಟೋನ್, ಜೇಮೀ ಓವರ್ಟನ್, ಆಲಿ ಪೋಪ್, ಆಲ್ಲಿ ರಾಬಿನ್ಸನ್, ಜೋ ರೂಟ್, ಮಾರ್ಕ್ ವುಡ್ , ರೆಹಾನ್ ಅಹ್ಮದ್.