
ಮಹಾರಾಜ ಟ್ರೋಫಿ 2024 ರಲ್ಲಿ ಶಿವಮೊಗ್ಗ ಲಯನ್ಸ್ ತಂಡದ ಬ್ಯಾಟರ್ ಅಭಿನವ್ ಮನೋಹರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಬರೋಬ್ಬರಿ 52 ಸಿಕ್ಸ್ಗಳನ್ನು ಸಿಡಿಸುವ ಮೂಲಕ ಎಂಬುದು ವಿಶೇಷ. ಅಂದರೆ ಮಹಾರಾಜ ಟ್ರೋಫಿ ಇತಿಹಾಸದಲ್ಲೇ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಅಭಿನವ್ ಪಾಲಾಗಿದೆ.

ಇದಕ್ಕೂ ಮುನ್ನ ಈ ದಾಖಲೆ ಮೊಹಮ್ಮದ್ ತಾಹ ಹೆಸರಿನಲ್ಲಿತ್ತು. 2023 ರ ಸೀಸನ್ನಲ್ಲಿ ಹುಬ್ಬಳ್ಳಿ ಟೈಗರ್ಸ್ ಪರ ಕಣಕ್ಕಿಳಿದಿದ್ದ ತಾಹ 12 ಪಂದ್ಯಗಳಿಂದ 32 ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಈ ಮೂಲಕ ಮಹಾರಾಜ ಟೂರ್ನಿಯ ಒಂದೇ ಸೀಸನ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಬರೆದಿದ್ದರು.

ಆದರೆ ಈ ಬಾರಿಯ ಟೂರ್ನಿಯಲ್ಲಿ ಅಭಿನವ್ ಮನೋಹರ್ ಸಿಡಿಲಬ್ಬರ ಪ್ರದರ್ಶಿಸಿದ್ದಾರೆ. ಆಡಿದ 10 ಪಂದ್ಯಗಳಲ್ಲಿ ಸ್ಪೋಟಕ ಇನಿಂಗ್ಸ್ ಆಡಿರುವ ಮನೋಹರ್ 52 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಮಹಾರಾಜ ಟಿ20 ಟೂರ್ನಿಯ ಆವೃತ್ತಿಯೊಂದರಲ್ಲಿ 50 ಸಿಕ್ಸ್ಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

ಅಷ್ಟೇ ಅಲ್ಲದೆ ಮಹಾರಾಜ ಟಿ20 ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಸಹ ಮನೋಹರ್ ತಮ್ಮದಾಗಿಸಿಕೊಂಡಿದ್ದಾರೆ. 2022ರ ಸೀಸನ್ನಲ್ಲಿ 27 ಸಿಕ್ಸ್ ಬಾರಿಸಿದ್ದ ಅಭಿನವ್, 2023 ರಲ್ಲಿ 16 ಸಿಕ್ಸ್ ಸಿಡಿಸಿದ್ದರು. ಇದೀಗ 52 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಈ ಮೂಲಕ 95 ಸಿಕ್ಸ್ಗಳೊಂದಿಗೆ ಮಹಾರಾಜ ಟಿ20 ಟೂರ್ನಿಯ ಸಿಕ್ಸರ್ ಕಿಂಗ್ ಎನಿಸಿಕೊಂಡಿದ್ದಾರೆ.

ವಿಶೇಷ ಎಂದರೆ ಈ ಬಾರಿಯ ಟೂರ್ನಿಯಲ್ಲಿ ಅಭಿನವ್ ಮಹೋರ್ ಬ್ಯಾಟ್ನಿಂದ ಮೂಡಿಬಂದಿರುವುದು 11 ಫೋರ್ಗಳು ಮಾತ್ರ. ಅಂದರೆ 10 ಪಂದ್ಯಗಳಿಂದ ಕಲೆಹಾಕಿರುವ 507 ರನ್ಗಳಲ್ಲಿ 312 ರನ್ಗಳು ಮೂಡಿಬಂದಿರುವುದು ಬರೀ ಸಿಕ್ಸ್ಗಳಿಂದ ಎಂಬುದು ವಿಶೇಷ.