6 ಓವರ್ಗಳಲ್ಲಿ 6 ವಿಕೆಟ್: ದಾಖಲೆ ಬರೆದ 18 ವರ್ಷದ ಅಫ್ಘಾನ್ ಸ್ಪಿನ್ನರ್
Afghanistan vs Bangladesh: ಬಾಂಗ್ಲಾದೇಶ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಫ್ಘಾನಿಸ್ತಾನ್ ತಂಡ ಶುಭಾರಂಭ ಮಾಡಿದೆ. ಶಾರ್ಜಾದಲ್ಲಿ ನಡೆದ ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಅಫ್ಘಾನಿಸ್ತಾನ್ ತಂಡ 92 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
1 / 7
ಶಾರ್ಜಾದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುವ ಸ್ಪಿನ್ನರ್ ಅಲ್ಲಾ ಘಝನ್ಫರ್. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ.
2 / 7
ಕೇವಲ 35 ರನ್ಗಳಿಸುವಷ್ಟರಲ್ಲಿ ಅಫ್ಘಾನ್ ತಂಡದ ಅಗ್ರ ಕ್ರಮಾಂಕದ ಮೂವರು ಪೆವಿಲಿಯನ್ ಸೇರಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಶಾಹಿದಿ 92 ಎಸೆತಗಳಲ್ಲಿ 52 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಇನ್ನು ಇನ್ನು 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅನುಭವಿ ಮೊಹಮ್ಮದ್ ನಬಿ 79 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 84 ರನ್ ಸಿಡಿಸಿದರು. ಈ ಅರ್ಧಶತಕಗಳ ನೆರವಿನಿಂದ ಅಫ್ಘಾನಿಸ್ತಾನ್ ತಂಡವು 49.4 ಓವರ್ಗಳಲ್ಲಿ 235 ರನ್ಗಳಿಸಿ ಆಲೌಟ್ ಆಯಿತು.
3 / 7
236 ರನ್ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ತಂಡವು ಉತ್ತಮ ಆರಂಭ ಪಡೆದಿತ್ತು. ಆರಂಭಿಕ ಆಟಗಾರ ತಂಝಿದ್ ಹಸನ್ (3) ಬೇಗನೆ ಔಟಾದರೂ, ಸೌಮ್ಯ ಸರ್ಕಾರ್ (33) ಹಾಗೂ ನಾಯಕ ನಜ್ಮುಲ್ ಹೊಸೈನ್ ಶಾಂತೊ (47) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಕೇವಲ 2 ವಿಕೆಟ್ ಕಳೆದುಕೊಂಡು ಬಾಂಗ್ಲಾದೇಶ್ ತಂಡವು 25 ಓವರ್ಗಳಲ್ಲಿ 120 ರನ್ ಕಲೆಹಾಕಿತು.
4 / 7
ಈ ಹಂತದಲ್ಲಿ ದಾಳಿಗಿಳಿದ ಅಲ್ಲಾ ಘಝನ್ಫರ್ ಇಡೀ ಪಂದ್ಯದ ಚಿತ್ರಣ ಬದಲಿಸಿ ಬಿಟ್ಟರು. ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುತ್ತಾ ಸಾಗಿದ ಯುವ ಸ್ಪಿನ್ನರ್ ಬಾಂಗ್ಲಾ ಬ್ಯಾಟಿಂಗ್ ಬೆನ್ನಲುಬನ್ನೇ ಮುರಿದರು. ಪರಿಣಾಮ 120 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ್ ತಂಡವು 143 ರನ್ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಈ ಮೂಲಕ ಅಫ್ಘಾನಿಸ್ತಾನ್ ತಂಡವು 92 ರನ್ಗಳ ಭರ್ಜರಿ ಜಯ ಸಾಧಿಸಿದೆ.
5 / 7
ಇನ್ನು ಈ ಪಂದ್ಯದಲ್ಲಿ 6.3 ಓವರ್ಗಳನ್ನು ಎಸೆದ ಅಲ್ಲಾ ಘಝನ್ಫರ್ ಒಂದು ಮೇಡನ್ನೊಂದಿಗೆ ಕೇವಲ 26 ರನ್ ನೀಡಿ 6 ವಿಕೆಟ್ ಕಬಳಿಸಿದರು. ಈ ಮೂಲಕ ಅಫ್ಘಾನಿಸ್ತಾನ್-ಬಾಂಗ್ಲಾದೇಶ್ ನಡುವಣ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಶಕೀಬ್ ಅಲ್ ಹಸನ್ ಹೆಸರಿನಲ್ಲಿತ್ತು. 2019 ರಲ್ಲಿ ಶಕೀಬ್ ಅಫ್ಘಾನಿಸ್ತಾನ್ ವಿರುದ್ಧ 29 ರನ್ ನೀಡಿ 5 ವಿಕೆಟ್ ಕಬಳಿಸಿದ್ದು ಶ್ರೇಷ್ಠ ಪ್ರದರ್ಶನವಾಗಿತ್ತು.
6 / 7
ಇದೀಗ ಕೇವಲ 26 ರನ್ಗಳಿಗೆ 6 ವಿಕೆಟ್ ಉರುಳಿಸಿ ಅಲ್ಲಾ ಘಝನ್ಫರ್ ಹೊಸ ದಾಖಲೆ ಬರೆದಿದ್ದಾರೆ. ಹಾಗೆಯೇ ಅಫ್ಘಾನಿಸ್ತಾನ್ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ. 2017 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 18 ರನ್ ನೀಡಿ 7 ವಿಕೆಟ್ ಕಬಳಿಸಿದ ರಶೀದ್ ಖಾನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
7 / 7
ಹಾಗೆಯೇ 18ನೇ ವಯಸ್ಸಿನಲ್ಲಿ 5 ವಿಕೆಟ್ ಕಬಳಿಸಿ ಏಕದಿನ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ವಿಶ್ವದ 4ನೇ ಕಿರಿಯ ಬೌಲರ್ ಎನಿಸಿಕೊಂಡಿದ್ದಾರೆ. ಇದಲ್ಲದೆ ಶಾರ್ಜಾ ಪಿಚ್ನಲ್ಲಿ ಒಂದೇ ಪಂದ್ಯದಲ್ಲಿ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಎಂಬ ಹೆಗ್ಗಳಿಕೆಗೂ ಅಲ್ಲಾ ಘಝನ್ಫರ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (7/30) ಅಗ್ರಸ್ಥಾನದಲ್ಲಿದ್ದು, ಇದೀಗ 26 ರನ್ಗೆ 6 ವಿಕೆಟ್ ಉರುಳಿಸಿ ಅಲ್ಲಾ ಘಝನ್ಫರ್ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.