
ವುಮೆನ್ಸ್ ಒಡಿಐ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿರುವುದು ಆಸ್ಟ್ರೇಲಿಯಾದ ಸ್ಪಿನ್ನರ್ ಅಲನಾ ಕಿಂಗ್ (Alana King). ಅದು ಕೂಡ 10ನೇ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಎಂಬುದು ವಿಶೇಷ.

ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ನ 9ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 115 ರನ್ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಲನಾ ಕಿಂಗ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅನುಭವಿ ಬ್ಯಾಟರ್ ಬೆತ್ ಮೂನಿ ಜೊತೆಗೂಡಿ ಇನಿಂಗ್ಸ್ ಕಟ್ಟಿದ ಅಲನಾ ಕೇವಲ 48 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ವಿಶೇಷ ಎಂದರೆ ಇದು ಏಕದಿನ ಕ್ರಿಕೆಟ್ನಲ್ಲಿ ಅಲನಾ ಅವರ ಚೊಚ್ಚಲ ಅರ್ಧಶತಕವಾಗಿದೆ.

ಈ ಚೊಚ್ಚಲ ಅರ್ಧಶತಕದೊಂದಿಗೆ ಅಲನಾ ಕಿಂಗ್ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಹೊಸ ಇತಿಹಾಸವನ್ನು ಸಹ ನಿರ್ಮಿಸಿದ್ದಾರೆ. ಅಂದರೆ ವುಮೆನ್ಸ್ ಒಡಿಐ ಕ್ರಿಕೆಟ್ನಲ್ಲಿ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಹಾಫ್ ಸೆಂಚುರಿ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಅಲನಾ ತಮ್ಮದಾಗಿಸಿಕೊಂಡಿದ್ದಾರೆ.

ಮಹಿಳಾ ಕ್ರಿಕೆಟ್ನಲ್ಲಿ ಎಂಟಕ್ಕಿಂತ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಅತ್ಯಧಿಕ ಸ್ಕೋರ್ಗಳಿಸಿದ ದಾಖಲೆ ಸೌತ್ ಆಫ್ರಿಕಾ ಯುಲಾಂಡಿ ವ್ಯಾನ್ ಡರ್ ಮರ್ವ್ ಹೆಸರಿನಲ್ಲಿತ್ತು. 2000 ರಲ್ಲಿ ಭಾರತದ ವಿರುದ್ಧದ ನಡೆದ ಏಕದಿನ ಪಂದ್ಯದಲ್ಲಿ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯುಲಾಂಡಿ 42 ರನ್ ಬಾರಿಸಿದ್ದರು. ಇದೀಗ 10ನೇ ಕ್ರಮಾಂಕದಲ್ಲಿ ಅಜೇಯ 51 ರನ್ ಬಾರಿಸುವ ಮೂಲಕ ಅಲನಾ ಕಿಂಗ್ ಹೊಸ ಇತಿಹಾಸ ರಚಿಸಿದ್ದಾರೆ.