- Kannada News Photo gallery Cricket photos Women's World Cup: Team India Batting Woes Ahead of South Africa Clash
World Cup 2025: ಪಾಕ್ ವಿರುದ್ಧ 172 ಎಸೆತಗಳಲ್ಲಿ ಒಂದೇ ಒಂದು ರನ್ ಕಲೆಹಾಕದ ಭಾರತ
Women's World Cup 2025: ಮಹಿಳಾ ವಿಶ್ವಕಪ್‌ನಲ್ಲಿ ಸತತ ಗೆಲುವು ಸಾಧಿಸಿರುವ ಟೀಂ ಇಂಡಿಯಾ, ಗುರುವಾರ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಆದರೆ, ಈ ಮಹತ್ವದ ಪಂದ್ಯಕ್ಕೂ ಮುನ್ನ ಭಾರತೀಯ ಬ್ಯಾಟರ್‌ಗಳ ಕಳಪೆ ಪ್ರದರ್ಶನವು ಆತಂಕ ಮೂಡಿಸಿದೆ. ಪಾಕಿಸ್ತಾನ ವಿರುದ್ಧವೂ ಹೆಚ್ಚು ಡಾಟ್ ಬಾಲ್‌ಗಳನ್ನು ಎದುರಿಸಿರುವುದು ಸಮಸ್ಯೆಯಾಗಿದೆ. ಸ್ಮೃತಿ ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್ ಫಾರ್ಮ್‌ಗೆ ಮರಳಿದರೆ ಮಾತ್ರ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧ್ಯ.
Updated on: Oct 08, 2025 | 6:42 PM

ಮಹಿಳಾ ವಿಶ್ವಕಪ್‌ನಲ್ಲಿ ಇದುವರೆಗೆ ಆಡಿರುವ ಎರಡೂ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ. ಇದೀಗ ಗುರುವಾರ ಅಂದರೆ ನಾಳೆ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುತ್ತಿದೆ. ಉಭಯ ತಂಡಗಳ ಸಾಕಷ್ಟು ಬಲಿಷ್ಠವಾಗಿರುವ ಕಾರಣ ಜಿದ್ದಾಜಿದ್ದಿನ ಕಾಳಗವನ್ನು ನಿರೀಕ್ಷಿಸಲಾಗುತ್ತಿದೆ. ಆದರೆ ದಕ್ಷಿಣ ಆಫ್ರಿಕಾವನ್ನು ಎದುರಿಸುವುದಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಅದೊಂದು ಸಮಸ್ಯೆ ಹಿನ್ನಡೆಯನ್ನುಂಟು ಮಾಡುತ್ತಿದೆ.

ವಾಸ್ತವವಾಗಿ ಹರ್ಮನ್‌ಪ್ರೀತ್ ಕೌರ್ ಪಡೆಯ ಸಮಸ್ಯೆಯೆಂದರೆ ತಂಡದ ಬ್ಯಾಟರ್‌ಗಳ ಕಳಪೆ ಪ್ರದರ್ಶನ. ಆಡಿರುವ ಎರಡೂ ಪಂದ್ಯಗಳಲ್ಲಿಯೂ ಬ್ಯಾಟಿಂಗ್ ವಿಭಾಗ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ಅದೇ ಮುಂದುವರೆದಿತ್ತು. ಅದರಲ್ಲೂ ಪಾಕಿಸ್ತಾನದಂತಹ ದುರ್ಬಲ ತಂಡದ ವಿರುದ್ಧ, ಭಾರತದ ಬ್ಯಾಟ್ಸ್‌ಮನ್‌ಗಳು 172 ಎಸೆತಗಳಲ್ಲಿ ಒಂದೇ ಒಂದು ರನ್ ಗಳಿಸಲಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.

ಅಕ್ಟೋಬರ್ 5 ರಂದು ನಡೆದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 88 ರನ್‌ಗಳಿಂದ ಜಯಗಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 247 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 159 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನ ಹೊರತಾಗಿಯೂ ಭಾರತದ ಬ್ಯಾಟರ್ಗಳು ಎದುರಿಸಿದ ಡಾಟ್ ಬಾಲ್ಗಳು ಟೀಂ ಇಂಡಿಯಾದ ಪ್ರದರ್ಶನದ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.

ಪಾಕಿಸ್ತಾನದ ಬೌಲರ್ ಸಾದಿಯಾ ಇಕ್ಬಾಲ್ ಟೀಂ ಇಂಡಿಯಾ ವಿರುದ್ಧ 34 ಡಾಟ್ ಬಾಲ್‌ಗಳನ್ನು ಎಸೆದರೆ, ಡಯಾನಾ ಬೇಗ್ 36, ಫಾತಿಮಾ ಸನಾ 39, ರಮೀನ್ ಶಮಿಮ್ 34, ಮತ್ತು ನಶ್ರಾ ಸಂಧು 29 ಎಸೆತಗಳಲ್ಲಿ ಯಾವುದೇ ರನ್ ನೀಡಲಿಲ್ಲ. ಸ್ಪಷ್ಟವಾಗಿ, ಇದು ಟೀಂ ಇಂಡಿಯಾದ ಬ್ಯಾಟರ್‌ಗಳ ಕಳಪೆ ಪ್ರದರ್ಶನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇದಕ್ಕೆ ಪೂರಕವಾಗಿ ಸ್ಮೃತಿ ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್ ಅತ್ಯುತ್ತಮ ಫಾರ್ಮ್‌ನಲ್ಲಿಲ್ಲ. ಪ್ರತಿಕಾ ರಾವಲ್ ಕೂಡ ವಿಶೇಷವಾದದ್ದೇನೂ ಮಾಡುತ್ತಿಲ್ಲ. ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಾದರೂ ತಂಡದ ಬ್ಯಾಟರ್ಗಳು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ತಂಡ ಮೇಲುಗೈ ಸಾಧಿಸಿದ್ದು, ಭಾರತ 15 ಏಕದಿನ ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ ಒಂಬತ್ತು ಪಂದ್ಯಗಳನ್ನು ಗೆದ್ದಿದೆ.
