
The Ashes, 2023: ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 600 ವಿಕೆಟ್ ಕಬಳಿಸಿದ ವಿಶ್ವದ 5ನೇ ಬೌಲರ್ ಎನಿಸಿಕೊಂಡರು.

ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 600+ ವಿಕೆಟ್ ಕಬಳಿಸಿರುವುದು ಕೇವಲ ಐವರು ಬೌಲರ್ಗಳು ಮಾತ್ರ. ಈ ಐವರಲ್ಲಿ ಮೂವರು ಸ್ಪಿನ್ನರ್ಗಳಾದರೆ, ಇಬ್ಬರು ಇಂಗ್ಲೆಂಡ್ ವೇಗಿಗಳು ಎಂಬುದು ವಿಶೇಷ. ಹಾಗಿದ್ರೆ ಟೆಸ್ಟ್ ಕ್ರಿಕೆಟ್ನಲ್ಲಿ 600 ಕ್ಕೂ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ಗಳು ಯಾರೆಲ್ಲಾ ಎಂದು ನೋಡೋಣ...

1- ಮುತ್ತಯ್ಯ ಮುರಳೀಧರನ್: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 800 ವಿಕೆಟ್ ಕಬಳಿಸಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

2- ಶೇನ್ ವಾರ್ನ್: ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಪಿನ್ ಮೋಡಿಗಾರ ಶೇನ್ ವಾರ್ನ್ ಒಟ್ಟು 708 ವಿಕೆಟ್ ಕಬಳಿಸಿದ್ದಾರೆ.

3- ಜೇಮ್ಸ್ ಅ್ಯಂಡರ್ಸನ್: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 600 ವಿಕೆಟ್ ಪಡೆದ ಮೊದಲ ವೇಗಿ ಇಂಗ್ಲೆಂಡ್ನ ಜೇಮ್ಸ್ ಅ್ಯಂಡರ್ಸನ್. ಒಟ್ಟು 688 ವಿಕೆಟ್ ಕಬಳಿಸಿ ಅ್ಯಂಡರ್ಸನ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

4- ಅನಿಲ್ ಕುಂಬ್ಳೆ: ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆ ಹೊಂದಿರುವ ಅನಿಲ್ ಕುಂಬ್ಳೆ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಕುಂಬ್ಳೆ ಒಟ್ಟು 619 ವಿಕೆಟ್ ಉರುಳಿಸಿ ಈ ಸಾಧನೆ ಮಾಡಿದ್ದಾರೆ.

5- ಸ್ಟುವರ್ಟ್ ಬ್ರಾಡ್: ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಇದೀಗ ಈ ಪಟ್ಟಿಯಲ್ಲಿ ಐದನೇ ಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 600 ವಿಕೆಟ್ ಪಡೆದ 2ನೇ ಇಂಗ್ಲೆಂಡ್ ಬೌಲರ್ ಎನಿಸಿಕೊಂಡಿದ್ದಾರೆ.