
ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ (Andre Russell) ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿಯುವ ಮೂಲಕ ಇಂಟರ್ನ್ಯಾಷನಲ್ ಕೆರಿಯರ್ಗೆ ವಿದಾಯ ಹೇಳುವುದಾಗಿ 37 ವರ್ಷದ ರಸೆಲ್ ತಿಳಿಸಿದ್ದಾರೆ.

2026 ರ ಟಿ20 ವಿಶ್ವಕಪ್ಗೂ ಮುನ್ನ ನಿವೃತ್ತಿ ನೀಡಲು ನಿರ್ಧರಿಸಿದ್ದು, ಅದರಂತೆ ಜಮೈಕಾದ ಸಬೀನಾ ಪಾರ್ಕ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುತ್ತಿರುವುದಾಗಿ ರಸೆಲ್ ತಿಳಿಸಿದ್ದಾರೆ. ಸಬೀನಾ ಪಾರ್ಕ್ ರಸೆಲ್ ಅವರ ತವರು ಮೈದಾನವಾಗಿದ್ದು, ಹೀಗಾಗಿ ಮೈದಾನದಲ್ಲಿ ನಡೆಯಲಿರುವ ಪಂದ್ಯದ ಮೂಲಕ ವಿದಾಯ ಹೇಳಲು ಅವರು ಬಯಸಿದ್ದಾರೆ.

2011 ರಲ್ಲಿ ಪಾಕಿಸ್ತಾನ್ ವಿರುದ್ದ ಕಣಕ್ಕಿಳಿಯುವ ಮೂಲಕ ವೆಸ್ಟ್ ಇಂಡೀಸ್ ಪರ ಟಿ20 ಕೆರಿಯರ್ ಆರಂಭಿಸಿದ್ದ ಆ್ಯಂಡ್ರೆ ರಸೆಲ್ 86 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 75 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು 3 ಅರ್ಧಶತಕಗೊಂದಿಗೆ 1122 ರನ್ ಕಲೆಹಾಕಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲಿ 61 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಇನ್ನು 2011 ರಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಆ್ಯಂಡ್ರೆ ರಸೆಲ್ ಈವರೆಗೆ ಆಡಿರುವುದು 56 ಪಂದ್ಯಗಳನ್ನು ಮಾತ್ರ. ಈ ವೇಳೆ 4 ಅರ್ಧಶತಕಗಳೊಂದಿಗೆ 1034 ರನ್ ಕಲೆಹಾಕಿದ್ದಾರೆ. ಇನ್ನು 55 ಏಕದಿನ ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 70 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ.

ಇದೀಗ 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ಗೆ ಆ್ಯಂಡ್ರೆ ರಸೆಲ್ ಗುಡ್ ಬೈ ಹೇಳಿದ್ದಾರೆ. ಇದಾಗ್ಯೂ ಮುಂಬರುವ ದಿನಗಳಲ್ಲಿ ಟಿ20 ಲೀಗ್ಗಳಲ್ಲಿ ಮುಂದುವರೆಯುವುದಾಗಿ ಅವರು ತಿಳಿಸಿದ್ದಾರೆ. ಅದರಂತೆ ಐಪಿಎಲ್. ಸಿಪಿಎಲ್, ಎಂಸಿಎಲ್ ಸೇರಿದಂತೆ ವಿಶ್ವದ ಪ್ರಮುಖ ಟಿ20 ಲೀಗ್ನಲ್ಲಿ ಆ್ಯಂಡ್ರೆ ರಸೆಲ್ ಅವರ ಟಿ20 ಆಟ ಮುಂದುವರೆಯಲಿದೆ.