- Kannada News Photo gallery Cricket photos Rahul Dravid's Son, Samit Dravid Goes Unsold In Maharaja Trophy T20 Auction
ರಾಹುಲ್ ದ್ರಾವಿಡ್ ಪುತ್ರ ಸಮಿತ್ ಅನ್ಸೋಲ್ಡ್..!
Samit Dravid: ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಸುಪುತ್ರ ಸಮಿತ್ ದ್ರಾವಿಡ್ ಕಳೆದ ಬಾರಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ಪರ ಕಣಕ್ಕಿಳಿದಿದ್ದರು. 7 ಪಂದ್ಯಗಳಲ್ಲಿ ಅವಕಾಶ ಪಡೆದಿದ್ದ ಸಮಿತ್ ಒಂದೇ ಒಂದು ಅರ್ಧಶತಕ ಬಾರಿಸಿರಲಿಲ್ಲ. ಅಲ್ಲದೆ ಕೇವಲ 9 ಫೋರ್ ಹಾಗೂ 3 ಸಿಕ್ಸ್ ಬಾರಿಸಲಷ್ಟೇ ಶಕ್ತರಾಗಿದ್ದಾರೆ.
Updated on: Jul 17, 2025 | 9:23 AM

ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಮೂರನೇ ಸೀಸನ್ಗೆ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಭಾಗವಾಗಿ ಇದೀಗ 6 ತಂಡಗಳ ಹರಾಜು ಪ್ರಕ್ರಿಯೆ ಮುಗಿದಿದೆ. ಈ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಲೆಜೆಂಡ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಬಿಕರಿಯಾಗದೇ ಉಳಿದಿದ್ದಾರೆ. ಅಂದರೆ ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಿಲ್ಲ.

ಕಳೆದ ಸೀಸನ್ನಲ್ಲಿ ಮೈಸೂರು ವಾರಿಯರ್ಸ್ ಪರ ಕಣಕ್ಕಿಳಿದಿದ್ದ ಸಮಿತ್ ದ್ರಾವಿಡ್ ಅವರಿಗಾಗಿ ಬಿಡ್ ಮಾಡಲು ಯಾವುದೇ ಫ್ರಾಂಚೈಸಿ ಮುಂದೆ ಬರಲಿಲ್ಲ. ಇದಕ್ಕೆ ಮುಖ್ಯ ಕಾರಣ ಕಳೆದ ಸೀಸನ್ನಲ್ಲಿನ ಕಳಪೆ ಪ್ರದರ್ಶನ. 2024 ರಲ್ಲಿ ಮೈಸೂರು ವಾರಿಯರ್ಸ್ ತಂಡದ ಪರ 7 ಪಂದ್ಯಗಳನ್ನಾಡಿದ್ದ ಸಮಿತ್ ಕಲೆಹಾಕಿದ್ದು ಕೇವಲ 82 ರನ್ಗಳು. ಈ 82 ರನ್ಗಳನ್ನು ಬಾರಿಸಲು ತೆಗೆದುಕೊಂಡಿದ್ದು ಬರೋಬ್ಬರಿ 72 ಎಸೆತಗಳನ್ನು ಎಂಬುದು ಇಲ್ಲಿ ಉಲ್ಲೇಖಾರ್ಹ.

ಮೈಸೂರು ವಾರಿಯರ್ಸ್ ಪರ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಸಮಿತ್ ದ್ರಾವಿಡ್ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಕಲೆಹಾಕಿದ್ದು ಕೇವಲ 5 ರನ್ಗಳು. ಇನ್ನು ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 12, ಹುಬ್ಬಳ್ಳಿ ಟೈಗರ್ಸ್ ವಿರುದ್ಧ 2, ಮಂಗಳೂರು ಡ್ರಾಗನ್ಸ್ ವಿರುದ್ಧ 16, ಶಿವಮೊಗ್ಗ ಲಯನ್ಸ್ ವಿರುದ್ಧ 7 ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 7 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಇನ್ನು ಕಳೆದ ಬಾರಿ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳಲ್ಲಿ 33 ರನ್ ಬಾರಿಸಿದ್ದು ಸಮಿತ್ ಅವರ ಗರಿಷ್ಠ ಸ್ಕೋರ್. ಅದರಂತೆ 7 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಯುವ ದಾಂಡಿಗ ಕೇವಲ 11.71 ಸರಾಸರಿಯಲ್ಲಿ 84 ರನ್ ಮಾತ್ರ ಕಲೆಹಾಕಿದ್ದರು. ಈ ಕಳಪೆ ಬ್ಯಾಟಿಂಗ್ ಕಾರಣದಿಂದಲೇ ಸಮಿತ್ ದ್ರಾವಿಡ್ ಅವರನ್ನು ಮೈಸೂರು ವಾರಿಯರ್ಸ್ ತಂಡವು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಕಣಕ್ಕಿಳಿಸಿರಲಿಲ್ಲ.

ಇದಾಗ್ಯೂ ಈ ಬಾರಿಯ ಮಹರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮತ್ತೊಂದು ಅವಕಾಶವನ್ನು ಎದುರು ನೋಡಿದ್ದ 19 ವರ್ಷದ ಸಮಿತ್ ದ್ರಾವಿಡ್ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಹೀಗಾಗಿ ಈ ಬಾರಿಯ ಮಹಾರಾಜ ಟ್ರೋಫಿ ಟಿ20 ಲೀಗ್ನಲ್ಲಿ ರಾಹುಲ್ ದ್ರಾವಿಡ್ ಪುತ್ರ ಕಾಣಿಸಿಕೊಳ್ಳುವುದಿಲ್ಲ.
