
ಟಿ20 ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ (Andre Russell) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಈವರೆಗೆ ಯಾರಿಂದಲೂ ಸಾಧ್ಯವಾಗದ ವರ್ಲ್ಡ್ ರೆಕಾರ್ಡ್ ಎಂಬುದು ವಿಶೇಷ. ಅಂದರೆ ಚುಟುಕು ಕ್ರಿಕೆಟ್‌ನಲ್ಲಿ ರಸೆಲ್ ಮೂರು ವಿಭಾಗಗಳಲ್ಲಿ ವಿಶೇಷ ಮೈಲುಗಲ್ಲು ದಾಟಿದ್ದಾರೆ.

ಶಾರ್ಜಾದಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಟಿ20 ಲೀಗ್ನಲ್ಲಿ ಅಬುಧಾಬಿ ಪರ ಕಣಕ್ಕಿಳಿಯುತ್ತಿರುವ ರಸೆಲ್ ಡೆಸರ್ಟ್ ವೈಪರ್ಸ್ ವಿರುದ್ಧದ ಪಂದ್ಯದಲ್ಲಿ 3 ಓವರ್ಗಳನ್ನು ಎಸೆದಿದ್ದರು. ಈ ವೇಳೆ 1 ವಿಕೆಟ್ ಕಬಳಿಸಿದ್ದಾರೆ. ಈ ಒಂದು ವಿಕೆಟ್ನೊಂದಿಗೆ ಆ್ಯಂಡ್ರೆ ರಸೆಲ್ ಟಿ20 ಕ್ರಿಕೆಟ್‌ನಲ್ಲಿ 500 ವಿಕೆಟ್ಗಳ ಸಾಧನೆ ಮಾಡಿದ್ದಾರೆ.

ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 500+ ವಿಕೆಟ್, 5000+ ರನ್ ಹಾಗೂ 500+ ಸಿಕ್ಸ್ ಸಿಡಿಸಿದ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಅಂದರೆ ರಸೆಲ್ ಅವರನ್ನು ಹೊರತುಪಡಿಸಿ ಟಿ20 ಕ್ರಿಕೆಟ್‌ನಲ್ಲಿ ಯಾರಿಗೂ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.

20 ಓವರ್‌ಗಳ ಕ್ರಿಕೆಟ್‌ನಲ್ಲಿ ಒಟ್ಟು 126 ಆಟಗಾರರು 5000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇನ್ನು 6 ಬೌಲರ್‌ಗಳು 500 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ 10 ಬ್ಯಾಟ್ಸ್‌ಮನ್‌ಗಳು 500 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆದರೆ ಮೂರು ಪಟ್ಟಿಗಳಲ್ಲಿ ಸ್ಥಾನ ಪಡೆದ ಏಕೈಕ ಆಟಗಾರ ರಸೆಲ್.

ಟಿ20 ಕ್ರಿಕೆಟ್‌ನಲ್ಲಿ ಈವರೆಗೆ 576 ಪಂದ್ಯಗಳನ್ನಾಡಿರುವ ಆ್ಯಂಡ್ರೆ ರಸೆಲ್ ಒಟ್ಟು 9496 ರನ್ ಕಲೆಹಾಕಿದ್ದಾರೆ. ಅಲ್ಲದೆ ಬರೋಬ್ಬರಿ 500 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಇನ್ನು 772 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಯಾರಿಗೂ ಸಾಧ್ಯವಾಗದ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.