ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್, ಪ್ರಸ್ತುತ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯ 3ನೇ ಟೆಸ್ಟ್ ಪಂದ್ಯದಲ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಈ ಮೂಲಕ ಕ್ರಿಕೆಟ್ನ ದೀರ್ಘ ಸ್ವರೂಪದಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ ಎಂಬ ಖ್ಯಾತಿಗೆ ಸ್ಟೋಕ್ಸ್ ಪಾತ್ರರಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಕೇವಲ 68 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ತಂಡ ಸಂಕಷ್ಟದಲ್ಲಿದ್ದಾಗ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಸ್ಟೋಕ್ಸ್ ನಾಯಕತ್ವದ ಇನ್ನಿಂಗ್ಸ್ ಆಡಿದರು. ತಮ್ಮ ಅಮೋಘ 80 ರನ್ಗಳ ಇನ್ನಿಂಗ್ಸ್ ಮೂಲಕ ಇಂಗ್ಲೆಂಡ್ ತಂಡವನ್ನು ಹಿನ್ನಡೆಯಿಂದ ಪಾರು ಮಾಡಿದ್ದಲ್ಲದೆ ಅಪರೂಪದ ಮೈಲಿಗಲ್ಲನ್ನು ದಾಟಿದರು.
ಇಂಗ್ಲೆಂಡ್ ಪರ 95ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬೆನ್ ಸ್ಟೋಕ್ಸ್, ಕ್ರಿಕೆಟ್ನ ಈ ದೀರ್ಫ ಸ್ವರೂಪದಲ್ಲಿ 6000 ರನ್ ಹಾಗೂ 100 ವಿಕೆಟ್ ಪಡೆದ 3ನೇ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ. ಸ್ಟೋಕ್ಸ್ಗೂ ಮೊದಲು ವಿಶ್ವ ಕ್ರಿಕೆಟ್ನಲ್ಲಿ ಇಬ್ಬರು ಆಟಗಾರರು ಈ ದಾಖಲೆ ಮಾಡಿದ್ದಾರೆ. ಆ ಇಬ್ಬರು ಯಾರೆಂದರೆ.?
ಸರ್ ಗಾರ್ಫೀಲ್ಡ್ ಸೋಬರ್ಸ್: ವೆಸ್ಟ್ ಇಂಡೀಸ್ ಕ್ರಿಕೆಟ್ನ ದಿಗ್ಗಜ ಆಲ್ರೌಂಡರ್ ಸರ್ ಗಾರ್ಫೀಲ್ಡ್ ಸೋಬರ್ಸ್ರವರು ವಿಂಡೀಸ್ ಪರ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಬ್ಯಾಟ್ನಿಂದ 8032 ರನ್ ಕಲೆಹಾಕಿದ್ದರೆ, ಬೌಲಿಂಗ್ನಲ್ಲಿ 235 ವಿಕೆಟ್ ಉರುಳಿಸಿದ್ದಾರೆ.
ಜಾಕ್ವೆಸ್ ಕಾಲಿಸ್: ಹಾಗೆಯೇ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಲ್ರೌಂಡರ್ ಜಾಕ್ವೆಸ್ ಕಾಲಿಸ್ ಕೂಡ ಆಫ್ರಿಕಾ ಪರ ಬ್ಯಾಟಿಂಗ್ನಲ್ಲಿ13289 ರನ್ ಕಲೆಹಾಕಿದ್ದು, ಬೌಲಿಂಗ್ನಲ್ಲಿ 292 ವಿಕೆಟ್ ಪಡೆದಿದ್ದಾರೆ.
ಇನ್ನು ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಐದು ಪಂದ್ಯಗಳ ಸರಣಿಯಲ್ಲಿ 0-2 ರಿಂದ ಹಿನ್ನಡೆಯಲ್ಲಿರುವ ಇಂಗ್ಲೆಂಡ್ ಈ ಪಂದ್ಯವನ್ನಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸೀಸ್ ಮೊದಲ ಇನ್ನಿಂಗ್ಸ್ನಲ್ಲಿ 263 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 237 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿತ್ತು. ಇದೀಗ 2ನೇ ಇನ್ನಿಂಗ್ಸ್ ಆರಂಭಿಸಿರುವ ಕಾಂಗರೂಗಳು 116 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದರೆ ಪ್ರತಿಷ್ಠಿತ ಆ್ಯಶಸ್ ಸರಣಿ ಅವರ ಪಾಲಾಗಲಿದೆ.