
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಆಶಸ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ತನ್ನ ತವರು ನೆಲವಾದ ಅಡಿಲೇಡ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಹೆಡ್ ಶತಕದ ಇನ್ನಿಂಗ್ಸ್ ಆಡಿದ್ದಾರೆ. ಈ ಮೂಲಕ ಹೆಡ್, ಡಾನ್ ಬ್ರಾಡ್ಮನ್, ಮೈಕೆಲ್ ಕ್ಲಾರ್ಕ್ ಮತ್ತು ಸ್ಟೀವ್ ಸ್ಮಿತ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆಶಸ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ, ಟ್ರಾವಿಸ್ ಹೆಡ್ 146 ಎಸೆತಗಳಲ್ಲಿ ಶತಕ ಬಾರಿಸಿದರು. ಈ ಶತಕದ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು. ಇದು ಹೆಡ್ ಅವರ 11 ನೇ ಟೆಸ್ಟ್ ಶತಕ ಮತ್ತು ಪ್ರಸ್ತುತ ಆಶಸ್ ಸರಣಿಯಲ್ಲಿ ಎರಡನೇ ಶತಕವಾಗಿದೆ. ಈ ಹಿಂದೆ ಮೊದಲ ಟೆಸ್ಟ್‌ನಲ್ಲಿಯೂ ಹೆಡ್ ಶತಕ ಗಳಿಸಿದ್ದರು.

ಆದಾಗ್ಯೂ, 99 ರನ್‌ಗಳಿಸಿದ್ದಾ್ ಹೆಡ್ ನೀಡಿದ ಕ್ಯಾಚ್ ಅನ್ನು ಹ್ಯಾರಿ ಬ್ರೂಕ್ ಕೈಬಿಡದಿದ್ದರೆ ಹೆಡ್ ಅಡಿಲೇಡ್‌ನಲ್ಲಿ ಶತಕ ಬಾರಿಸಲು ಸಾಧ್ಯವಾಗುತ್ತಿರಲಿಲ್ಲ. ಆರ್ಚರ್ ಎಸೆತದಲ್ಲಿ ಹೆಡ್ ಸ್ಲಿಪ್‌ನಲ್ಲಿ ನಿಂತಿದ್ದ ಬ್ರೂಕ್ಗೆ ಕ್ಯಾಚ್ ನೀಡಿದ್ದರು. ಆದರೆ ಬ್ರೂಕ್ ಆ ಕ್ಯಾಚ್ ಅನ್ನು ಕೈಚೆಲ್ಲಿದರು. ಇದರ ಲಾಭ ಪಡೆದ ಹೆಡ್ ದಿನದಾಟದಂತ್ಯಕ್ಕೆ 142 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ.

ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಟ್ರಾವಿಸ್ ಹೆಡ್, ತನ್ನ ತವರು ನೆಲವಾದ ಅಡಿಲೇಡ್‌ನಲ್ಲಿ ಸತತ ನಾಲ್ಕನೇ ಟೆಸ್ಟ್ ಶತಕ ಬಾರಿಸಿದ್ದಾರೆ. ಈ ಮೂಲಕ ಡಾನ್ ಬ್ರಾಡ್ಮನ್, ಮೈಕೆಲ್ ಕ್ಲಾರ್ಕ್ ಮತ್ತು ಸ್ಟೀವ್ ಸ್ಮಿತ್ ಅವರ ಆಸ್ಟ್ರೇಲಿಯಾದ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ.

ವಾಸ್ತವವಾಗಿ ಬ್ರಾಡ್ಮನ್ ಎರಡು ಕ್ರೀಡಾಂಗಣದಲ್ಲಿ ಸತತ ಶತಕ ಬಾರಿಸಿದ್ದ ಸಾಧನೆ ಮಾಡಿದ್ದರು. ಅವರು ಎಂಸಿಜಿ ಮತ್ತು ಹೆಡಿಂಗ್ಲಿಯಲ್ಲಿ ತಲಾ ನಾಲ್ಕು ಶತಕಗಳನ್ನು ಬಾರಿಸಿದ್ದರು. ಮೈಕೆಲ್ ಕ್ಲಾರ್ಕ್ ಅಡಿಲೇಡ್‌ನಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ್ದರು. ಸ್ಟೀವ್ ಸ್ಮಿತ್ ಎಂಸಿಜಿಯಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ. ಇದೀಗ ಟ್ರಾವಿಸ್ ಹೆಡ್ 2022 ಮತ್ತು 2025 ರ ನಡುವೆ ಅಡಿಲೇಡ್‌ನಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ್ದಾರೆ.

ಅಡಿಲೇಡ್‌ನಲ್ಲಿ ನಡೆದ ಮೂರನೇ ದಿನದಾಟದ ಅಂತ್ಯಕ್ಕೆ, ಟ್ರಾವಿಸ್ ಹೆಡ್ 196 ಎಸೆತಗಳಲ್ಲಿ 142 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಅವರು ತಮ್ಮ ಇನ್ನಿಂಗ್ಸ್ ಅನ್ನು ವಿಸ್ತರಿಸುವ ನಿರೀಕ್ಷೆಯಿದೆ. ಹೆಡ್ ಸ್ವತಃ ತಮ್ಮ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವ ಅವಕಾಶ ಹೊಂದಿದ್ದಾರೆ.