
ಸ್ಟೀವ್ ಸ್ಮಿತ್ (Steve Smith) ಟೆಸ್ಟ್ ಕ್ರಿಕೆಟ್ನಲ್ಲಿ 37ನೇ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ಆ್ಯಶಸ್ ಸರಣಿಯಲ್ಲಿ ಸ್ಮಿತ್ ವಿಶೇಷ ಮೈಲಿಗಲ್ಲನ್ನು ದಾಟಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 384 ರನ್ ಕಲೆಹಾಕಿತು.

ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆರಂಭದಿಂದಲೇ ಕಲಾತ್ಮಕ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದ ಸ್ಮಿತ್ 166 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದೊಂದಿಗೆ ಆ್ಯಶಸ್ ಸರಣಿ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ 2ನೇ ಬ್ಯಾಟರ್ ಎನಿಸಿಕೊಂಡರು.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಆಸ್ಟ್ರೇಲಿಯನ್ ಲೆಜೆಂಡ್ ಡಾನ್ ಬ್ರಾಡ್ಮನ್. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 63 ಇನಿಂಗ್ಸ್ ಆಡಿರುವ ಡಾನ್ ಬ್ರಾಡ್ಮನ್ ಒಟ್ಟು 19 ಶತಕ ಬಾರಿಸಿದ್ದಾರೆ. ಇದೀಗ 73 ಇನಿಂಗ್ಸ್ಗಳಲ್ಲಿ 13 ಸೆಂಚುರಿ ಸಿಡಿಸಿ ಸ್ಟೀವ್ ಸ್ಮಿತ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.

ಅಷ್ಟೇ ಅಲ್ಲದೆ ಈ ಶತಕದೊಂದಿಗೆ ಸ್ಟೀವ್ ಸ್ಮಿತ್ ಆ್ಯಶಸ್ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ಪಟ್ಟಿಯಲ್ಲಿ ಇಂಗ್ಲೆಂಡ್ನ ಬ್ಯಾಟರ್ ಜಾಕ್ ಹಾಬ್ಸ್ ಎರಡನೇ ಸ್ಥಾನದಲ್ಲಿದ್ದರು.

ಇಂಗ್ಲೆಂಡ್ ಪರ 41 ಆ್ಯಶಸ್ ಟೆಸ್ಟ್ ಪಂದ್ಯವಾಡಿರುವ ಜಾಕ್ ಹಾಬ್ಸ್ 71 ಇನಿಂಗ್ಸ್ಗಳ ಮೂಲಕ 12 ಶತಕದೊಂದಿಗೆ ಒಟ್ಟು 3636 ರನ್ ಕಲೆಹಾಕಿದ್ದರು. ಈ ಮೂಲಕ ಆ್ಯಶಸ್ ಸರಣಿಯಲ್ಲಿ ಡಾನ್ ಬ್ರಾಡ್ಮನ್ (5028) ಬಳಿಕ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಜಾಕ್ ಹಾಬ್ಸ್ ಅವರನ್ನು ಹಿಂದಿಕ್ಕಿ ಸ್ಟೀವ್ ಸ್ಮಿತ್ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಸ್ಮಿತ್ ಆ್ಯಶಸ್ ಸರಣಿಯಲ್ಲಿ ಆಡಿದ 73 ಇನಿಂಗ್ಸ್ಗಳೊಂದಿಗೆ 3660* ರನ್ ಕಲೆಹಾಕಿದ್ದಾರೆ. ಈ ಮೂಲಕ ಪ್ರತಿಷ್ಠಿತ ಟೆಸ್ಟ್ ಸರಣಿಯಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಎರಡನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.