ಕಂಬ್ಯಾಕ್ ಬೆನ್ನಲ್ಲೇ ಶ್ರೇಯಸ್ ಅಯ್ಯರ್ಗೆ ಒಲಿದ ನಾಯಕತ್ವ
Shreyas Iyer: ಅಕ್ಟೋಬರ್ 25, 2025 ರಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ಪ್ರಯತ್ನದ ವೇಳೆ ಶ್ರೇಯಸ್ ಅಯ್ಯರ್ ಗಂಭೀರವಾಗಿ ಗಾಯಗೊಂಡಿದ್ದರು. ಈ ಗಾಯದ ಬಳಿಕ ಅಯ್ಯರ್ ಯಾವುದೇ ಪಂದ್ಯವಾಡಿರಲಿಲ್ಲ. ಇದೀಗ ವಿಜಯ ಹಝಾರೆ ಟೂರ್ನಿಯ ಮೂಲಕ ಶ್ರೇಯಸ್ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.
Updated on: Jan 06, 2026 | 7:58 AM

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ (Shreyas Iyer) ಇದೀಗ ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಅದು ಸಹ ವಿಜಯ ಹಝಾರೆ ಟೂರ್ನಿಯ ಮೂಲಕ ಎಂಬುದು ವಿಶೇಷ. ಅಂದರೆ ಪ್ರಸ್ತುತ ನಡೆಯುತ್ತಿರುವ ವಿಜಯ ಹಝಾರೆ ಟೂರ್ನಿಯ ಪಂದ್ಯದಲ್ಲಿ ಅಯ್ಯರ್ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.

ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ ಗಾಯಗೊಂಡಿದ್ದು, ಹೀಗಾಗಿ ಉಳಿದ ಪಂದ್ಯಗಳಿಂದ ಅವರು ಹೊರಗುಳಿದಿದ್ದಾರೆ. ಹೀಗಾಗಿ ಮುಂಬೈ ತಂಡದ ಸಾರಥ್ಯವನ್ನು ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ಗೆ ವಹಿಸಲಾಗಿದೆ.

ಅದರಂತೆ ಇಂದು (ಜ.6) ನಡೆಯಲಿರುವ ಹಿಮಾಚಲ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಅಷ್ಟೇ ಅಲ್ಲದೆ ಜನವರಿ 8 ರಂದು ನಡೆಯಲಿರುವ ಪಂಜಾಬ್ ವಿರುದ್ಧದ ಮ್ಯಾಚ್ನಲ್ಲೂ ಅಯ್ಯರ್ ಕ್ಯಾಪ್ಟನ್ ಆಗಿ ಕಣಕ್ಕಿಳಿಯಲಿದ್ದಾರೆ.

ಈ ಎರಡು ಮ್ಯಾಚ್ಗಳ ಮೂಲಕ ಶ್ರೇಯಸ್ ಅಯ್ಯರ್ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಿದ್ದು, ಇದಾದ ಬಳಿಕ ಭಾರತ ತಂಡವನ್ನು ಕೂಡಿಕೊಳ್ಳಲು ನಿರ್ದೇಶಿಸಲಾಗಿದೆ. ಅಂದರೆ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿದೆ. ಇದಾಗ್ಯೂ ಗಾಯದ ಕಾರಣ ಹೊರಗುಳಿದಿದ್ದರಿಂದ ಅವರು ದೇಶೀಯ ಪಂದ್ಯವನ್ನಾಡಿ ಫಿಟ್ನೆಸ್ ಸಾಬೀತುಪಡಿಸಲು ಸೂಚಿಸಲಾಗಿದೆ. ಹೀಗಾಗಿ ಜನವರಿ 8 ರ ಬಳಿಕವಷ್ಟೇ ಶ್ರೇಯಸ್ ಅಯ್ಯರ್ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಖಚಿತವಾಗಲಿದೆ.

ಭಾರತ ಏಕದಿನ ತಂಡ : ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್.
