
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಆಶಸ್ ಸರಣಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಸರಣಿಯ ಕೊನೆಯ ಪಂದ್ಯ ಸಿಡ್ನಿ ಮೈದಾನದಲ್ಲಿ ಇಂದಿನಿಂದ ಆರಂಭವಾಗಿದೆ. ಆದರೆ ಪಂದ್ಯದ ಮೊದಲ ದಿನದಾಟ ಭಾಗಶಃ ಮಳೆಗೆ ಆಹುತಿಯಾಯಿತು. ಹೀಗಾಗಿ ಆರಂಭಿಕ ಆಘಾತದಿಂದ ಹೊರಬಂದಿದ್ದ ಇಂಗ್ಲೆಂಡ್ಗೆ ಬೃಹತ್ ಮೊತ್ತವನ್ನು ಕಲೆಹಾಕಲು ಸಾಧ್ಯವಾಗಲಿಲ್ಲ.

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 211 ರನ್ ಕಲೆಹಾಕಿದೆ. ಆದಾಗ್ಯೂ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ತಂಡದ ಮೂವರು ಆರಂಭಿಕ ಆಟಗಾರರು ವಿಫಲರಾದರು. ಈ ಮೂವರು ಸೇರಿ ಕೇವಲ 53 ರನ್ಗಳನಷ್ಟೇ ಕಲೆಹಾಕಿದರು.

ಆದರೆ ಆ ಬಳಿಕ ಜೊತೆಯಾದ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇವರಿಬ್ಬರ ಆಟದಿಂದಾಗಿ ತಂಡ 200 ರನ್‌ಗಳ ಗಡಿ ಕೂಟ ದಾಡಿತು. ಅಷ್ಟರಲ್ಲಾಗಲೇ ಇವರಿಬ್ಬರ ನಡುವೆ 154 ರನ್‌ಗಳ ಜೊತೆಯಾಟ ಕೂಡ ನಡೆದಿತ್ತು. ಆದರೆ ಈ ಹಂತದಲ್ಲಿ ಸಿಡ್ನಿ ಟೆಸ್ಟ್ ಹಠಾತ್ತನೆ ರದ್ದಾಯಿತು. ಇದಕ್ಕೆ ಕಾರಣ ಮಂದ ಬೆಳಕು ಮತ್ತು ಮಳೆ.

ಸಿಡ್ನಿ ಟೆಸ್ಟ್‌ನ ಮೊದಲ ದಿನದ ಮೊದಲ ಸೆಷನ್ ಯಾವುದೇ ಅಡೆತಡೆ ಇಲ್ಲದೆ ನಡೆಯಿತು. ಊಟದ ನಂತರ ಎರಡನೇ ಸೆಷನ್ ಇಂಗ್ಲೆಂಡ್ ಪರವಾಗಿತ್ತು. ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಇಬ್ಬರೂ ಜವಾಬ್ದಾರಿಯುತವಾಗಿ ತಮ್ಮ ಇನ್ನಿಂಗ್ಸ್ ನಿಭಾಯಿಸಿದರು. ಆದಾಗ್ಯೂ, ಕಳಪೆ ಬೆಳಕಿನಿಂದಾಗಿ ಆಟವು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ಆ ಬಳಿಕ ಸಿಡ್ನಿಯಲ್ಲಿ ಭಾರೀ ಮಳೆ ಬೀಳಲು ಪ್ರಾರಂಭಿಸಿತು.

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕಳಪೆ ಬೆಳಕಿನಿಂದ ಆಟ ನಿಂತಾಗ , ಜೋ ರೂಟ್ 103 ಎಸೆತಗಳಲ್ಲಿ 72 ರನ್ ಗಳಿಸಿ, ತಮ್ಮ 67ನೇ ಟೆಸ್ಟ್ ಅರ್ಧಶತಕ ದಾಖಲಿಸಿದರೆ, ಹ್ಯಾರಿ ಬ್ರೂಕ್ 92 ಎಸೆತಗಳಲ್ಲಿ 78 ರನ್ ಗಳಿಸಿದ್ದರು. ಹಾಗೆಯೇ ಆಟ ಸ್ಥಗಿತಗೊಳ್ಳುವ ಮೊದಲು ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ 193 ಎಸೆತಗಳಲ್ಲಿ ಅಜೇಯ 154 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿದ್ದರು.