- Kannada News Photo gallery Cricket photos Vaibhav Suryavanshi: 14-Year-Old Breaks ODI World Record as Youngest Captain
ಆಟಗಾರನಾಗಿ ವಿಫಲರಾದರೂ ನಾಯಕನಾಗಿ ಇತಿಹಾಸ ನಿರ್ಮಿಸಿದ ವೈಭವ್ ಸೂರ್ಯವಂಶಿ
Vaibhav Suryavanshi: ಕೇವಲ 14 ವರ್ಷದ ವೈಭವ್ ಸೂರ್ಯವಂಶಿ ಭಾರತ ಯುವ ತಂಡದ ನಾಯಕನಾಗಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸುವ ಮೂಲಕ ಏಕದಿನ ಪಂದ್ಯವನ್ನು ಗೆದ್ದ ಅತ್ಯಂತ ಕಿರಿಯ ನಾಯಕ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 15 ವರ್ಷದ ಅಹ್ಮದ್ ಶೆಹಜಾದ್ ಅವರ ದಾಖಲೆಯನ್ನು ವೈಭವ್ ಮುರಿದಿದ್ದಾರೆ. ಈ ಸಾಧನೆಯು ಯುವ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ.
Updated on: Jan 04, 2026 | 7:45 PM

ಕಳೆದೊಂದು ವರ್ಷದಲ್ಲಿ ತನ್ನ ಆಟದ ಮೂಲಕವೇ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿರುವ ವೈಭವ್ ಸೂರ್ಯವಂಶಿ ಕೇವಲ 14 ವರ್ಷಕ್ಕೆ ಐಪಿಎಲ್ಗೆ ಪದಾರ್ಪಣೆ ಮಾಡಿ ದಾಖಲೆ ನಿರ್ಮಿಸಿದ್ದರು. ಇದರ ಜೊತೆಗೆ ಭಾರತ ತಂಡಕ್ಕೂ ಎಂಟ್ರಿಕೊಟ್ಟು ಅಬ್ಬರಿಸಿದ್ದರು. ಇದರ ಫಲವಾಗಿ ವೈಭವ್ಗೆ ಮೊಟ್ಟ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿಯೂ ಸಿಕ್ಕಿದೆ.

ವಾಸ್ತವವಾಗಿ ಭಾರತ ಯುವ ತಂಡ ಮೂರು ಪಂದ್ಯಗಳ ಯೂತ್ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದೆ. ಈ ಪ್ರವಾಸದಲ್ಲಿ ವೈಭವ್ಗೆ ಟೀಂ ಇಂಡಿಯಾವನ್ನು ಮುನ್ನಡೆಸುವ ಅವಕಾಶವೂ ಸಿಕ್ಕಿದೆ. ಕೆಲವೇ ದಿನಗಳಲ್ಲಿ ಅಂಡರ್-19 ಟಿ20 ವಿಶ್ವಕಪ್ ಆರಂಭವಾಗಲಿರುವುದರಿಂದ ಭಾರತ ತಂಡಕ್ಕೆ ಈ ಪ್ರವಾಸ ಅತ್ಯಂತ ಮುಖ್ಯವಾಗಿದೆ.

ನಿಯಮಿತ ನಾಯಕ ಆಯುಷ್ ಮ್ಹಾತ್ರೆ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ವೈಭವ್, ತಮ್ಮ ಚೊಚ್ಚಲ ನಾಯಕತ್ವದ ಪಂದ್ಯದಲ್ಲಿ ಆಟಗಾರನಾಗಿ ವಿಫಲನಾದರೂ, ನಾಯಕನಾಗಿ ಮತ್ತೊಂದು ವಿಶ್ವದಾಖಲೆ ಸೃಷ್ಟಿಸಿದ್ದಾರೆ. ದಕ್ಷಿಣ ಆಫ್ರಿಕಾ ಯುವ ತಂಡದ ವಿರುದ್ಧ ನಡೆದ ಮೊದಲ ಪಂದ್ಯವನ್ನು ಭಾರತ ತಂಡ ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ಗೆಲುವು ಸಾಧಿಸಿತು. ಈ ಮೂಲಕ ವೈಭವ್ ವಿಶ್ವದಾಖಲೆಯೊಂದಕ್ಕೆ ಕೊರಳೊಡ್ಡಿದ್ದಾರೆ.

ಈ ಗೆಲುವಿನೊಂದಿಗೆ ವೈಭವ್ ಸೂರ್ಯವಂಶಿ ಏಕದಿನ ಪಂದ್ಯವನ್ನು ಗೆದ್ದ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೈಭವ್ ಸೂರ್ಯವಂಶಿ 14 ನೇ ವಯಸ್ಸಿನಲ್ಲಿ ಯೂತ್ ಏಕದಿನ ಪಂದ್ಯವನ್ನು ಗೆದ್ದ ಮೊದಲ ನಾಯಕ ಎನಿಸಿಕೊಂಡಿದ್ದಾರೆ. ಇದರೊಂದಿಗೆ 15 ವರ್ಷ ಮತ್ತು 141 ದಿನಗಳ ವಯಸ್ಸಿನಲ್ಲಿ ನಾಯಕನಾಗಿ ಮೊದಲ ಪಂದ್ಯವನ್ನು ಗೆದ್ದ ಪಾಕಿಸ್ತಾನದ ಅಹ್ಮದ್ ಶೆಹಜಾದ್ ಅವರ ದಾಖಲೆಯನ್ನು ವೈಭವ್ ಮುರಿದಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 300 ರನ್ ಗಳಿಸಿತು. ಆಟಗಾರನಾಗಿ ವಿಫಲರಾದ ವೈಭವ್ ಸೂರ್ಯವಂಶಿ ಕೇವಲ 11 ರನ್ ಗಳಿಸಿ ಔಟಾದರು. ಆದರೆ ಹರ್ವಂಶ್ ಪಂಗಾಲಿಯಾ ಅವರ 93 ಮತ್ತು ಆಂಬ್ರಿಸ್ ಅವರ 65 ರನ್‌ಗಳ ನೆರವಿನಿಂದ ಭಾರತ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಉತ್ತರವಾಗಿ, ದಕ್ಷಿಣ ಆಫ್ರಿಕಾ 27.4 ಓವರ್‌ಗಳಲ್ಲಿ 148 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಮಳೆಯಿಂದಾಗಿ ಪಂದ್ಯವನ್ನು ಡಕ್‌ವರ್ತ್-ಲೂಯಿಸ್ ವಿಧಾನದ ಮೂಲಕ ಭಾರತ 25 ರನ್‌ಗಳಿಂದ ಗೆದ್ದುಕೊಂಡಿತು.

ಬೆನೋನಿಯಲ್ಲಿ ಮಳೆ ಮತ್ತು ಭಾರೀ ಮಿಂಚಿನಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಆಟಗಾರರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ನಂತರ ಪಂದ್ಯವನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದ ಅಂಪೈರ್ಗಳು ಅಂತಿಮವಾಗಿ ಭಾರತವನ್ನು ವಿಜಯಿ ಎಂದು ಘೋಷಿಸಿದರು. ಮುಂದಿನ ಪಂದ್ಯ ಜನವರಿ 5 ರಂದು ನಡೆಯಲಿದೆ.
