
ಏಷ್ಯಾ ಕಪ್ 2025 ರ ಎರಡನೇ ಪಂದ್ಯ ಭಾರತ ಮತ್ತು ಯುಎಇ ತಂಡಗಳ ನಡುವೆ ನಡೆಯುತ್ತಿದೆ. ಎರಡೂ ತಂಡಗಳ ನಡುವಿನ ಈ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೀಂ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿದ್ದರೆ, ಮುಹಮ್ಮದ್ ವಾಸಿಮ್ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ನಾಯಕರಾಗಿದ್ದಾರೆ.

ಪಂದ್ಯಕ್ಕೂ ಮುನ್ನವೇ ತಂಡಗಳ ಬಲಾಬಲವನ್ನು ನೋಡಿದರೆ, ಟೀಂ ಇಂಡಿಯಾವೇ ಇದರಲ್ಲಿ ಗೆಲುವಿನ ಫೇವರೇಟ್ ಎನ್ನಬಹುದು. ಇದೀಗ ಇದಕ್ಕೆ ಪೂರಕವಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರರು ಕೂಡ ಟೀಂ ಇಂಡಿಯಾವನ್ನು ಹೊಗಳಿ ಮಾತನಾಡಿದ್ದು, ಯುಎಇ ವಿರುದ್ಧ ಸುಲಭವಾಗಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ವಾಸ್ತವವಾಗಿ, ಯುಎಇ ವಿರುದ್ಧ ಭಾರತದ ಮೊದಲ ಪಂದ್ಯಕ್ಕೂ ಮೊದಲು, ಶೋಯೆಬ್ ಅಖ್ತರ್, ಮಿಸ್ಬಾ-ಉಲ್-ಹಕ್, ಶೋಯೆಬ್ ಮಲಿಕ್ ಮತ್ತು ಉಮರ್ ಗುಲ್ ಅವರಂತಹ ಸ್ಟಾರ್ ಆಟಗಾರರು ಪಾಕಿಸ್ತಾನಿ ಸುದ್ದಿ ಕಾರ್ಯಕ್ರಮವೊಂದರಲ್ಲಿ ಪ್ರಸ್ತುತ ಭಾರತ ತಂಡ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ನೋಡಿ ಅಚ್ಚರಿಗೊಂಡಿದ್ದಾರೆ.

ಇದೇ ವೇಳೆ ಟೀಂ ಇಂಡಿಯಾ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಶೋಯೆಬ್ ಅಖ್ತರ್, ಭಾರತ ತಂಡದಲ್ಲಿ ಅಭಿಷೇಕ್ ಇದ್ದಾರೆ, ಬುಮ್ರಾ ಕೂಡ ಬಂದಿದ್ದಾರೆ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ರಿಂಕು ಸಿಂಗ್, ಶುಭಮನ್ ಗಿಲ್, ಸೂರ್ಯ, ಶಿವಂ ದುಬೆ, ಅಕ್ಷರ್ ಪಟೇಲ್ರಂತಹ ಸ್ಟಾರ್ ಆಟಗಾರರಿದ್ದಾರೆ. ಹೀಗಿರುವಾಗ ಈ ತಂಡವನ್ನು ಯಾರು ಸೋಲಿಸುತ್ತಾರೆ ಎಂದು ಅಖ್ತರ್ ಹೇಳಿದ್ದಾರೆ.

ಶೋಯೆಬ್ ಅಖ್ತರ್ ಮುಂದುವರೆದು, ‘ಭಾರತ ತಂಡವು ಯುಎಇಯನ್ನು ಸುಲಭವಾಗಿ ಸೋಲಿಸುತ್ತದೆ. ನೋಡಿ, ಯುಎಇ ಸೋಲಲಿದೆ ಎಂದು ನಮಗೆ ತಿಳಿದಿದೆ. ಆದರೆ ಕಡಿಮೆ ಅಂತರದ ಸೋಲು ಯುಎಇಗೆ ಗೆಲುವು ಎಂದು ನಾನು ಭಾವಿಸುತ್ತೇನೆ. ಈ ವಿಚಾರದಲ್ಲಿ ಹಾಂಗ್ ಕಾಂಗ್ ಬಗ್ಗೆ ನನಗೆ ಅಸಮಾಧಾನವಿದೆ. ನಿನ್ನೆ ಸಂಜೆ ಅಫ್ಘಾನಿಸ್ತಾನ ಅವರನ್ನು 94 ರನ್‌ಗಳಿಂದ ಸೋಲಿಸಿತು. ನೀವು ಸೋಲಬೇಕಾದರೆ, ಕನಿಷ್ಠ ಪಕ್ಷ ಸಣ್ಣ ಅಂತರದಿಂದ ಸೋಲಬೇಕು. ಆದ್ದರಿಂದ ನಿಮಗೆ ಏನಾದರೂ ಸಿಗುತ್ತದೆ. ಸ್ವಲ್ಪ ಹೋರಾಟದ ಮನೋಭಾವವನ್ನು ತೋರಿಸಿ ಎಂದು ಅಖ್ತರ್ ಯುಎಇ ತಂಡಕ್ಕೆ ಕಿವಿ ಮಾತು ಹೇಳಿದ್ದಾರೆ.