
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯುತ್ತಿರುವ ಮಧ್ಯೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇತ್ತೀಚಿನ ಟೆಸ್ಟ್ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಈ ಶ್ರೇಯಾಂಕದಲ್ಲಿ ಭಾರತದ ಆಟಗಾರರು ಭಾರೀ ನಷ್ಟವನ್ನು ಎದುರಿಸಿದ್ದು, ಅದರಲ್ಲೂ ಇಷ್ಟು ದಿನ ಬೌಲರ್ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟೆಸ್ಟ್‌ನಲ್ಲಿ ನಂಬರ್ 1 ಬೌಲರ್ ಕಿರೀಟದಿಂದ ವಂಚಿತರಾಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬುಮ್ರಾ ಅವರ ಪ್ರದರ್ಶನವು ಇಲ್ಲಿಯವರೆಗೆ ವಿಶೇಷವಾದದ್ದೇನೂ ಆಗಿಲ್ಲ. ಈ ಕಾರಣದಿಂದಾಗಿ ನಂಬರ್ 1 ಸ್ಥಾನದಿಂದ ಬುಮ್ರಾ ಕೆಳಗಿಳಿದರೆ, ಅವರ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ಬೌಲರ್ ಕಗಿಸೊ ರಬಾಡ ಬಂದಿದ್ದಾರೆ. ರಬಾಡ ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಇದರ ಪರಿಣಾಮವನ್ನು ಟೆಸ್ಟ್ ರ್ಯಾಂಕಿಂಗ್ನಲ್ಲಿ ಅನುಭವಿಸಿರುವ ಬುಮ್ರಾ, ನಂಬರ್ 1 ಸ್ಥಾನದಿಂದ ಇದೀಗ ನೇರವಾಗಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇತ್ತ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಈಗ ಟೆಸ್ಟ್‌ನ ಹೊಸ ನಂಬರ್-1 ಬೌಲರ್ ಎನಿಸಿಕೊಂಡಿದ್ದಾರೆ.

ಕಗಿಸೊ ರಬಾಡ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 300 ವಿಕೆಟ್‌ಗಳನ್ನು ಪಡೆದ ವೇಗದ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದ್ದರು. ಇದೀಗ ಐಸಿಸಿಯಿಂದ ಬಂಪರ್ ಗಿಫ್ಟ್ ಪಡೆದಿರುವ ರಬಾಡ, ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಸದ್ಯ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಉಭಯ ತಂಡಗಳ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಕಗಿಸೊ ರಬಾಡ ಒಟ್ಟು 9 ವಿಕೆಟ್ ಪಡೆದಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಒಟ್ಟು 3 ವಿಕೆಟ್ ಉರುಳಿಸಿದ್ದ ರಬಾಡ, ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನು ಪಡೆದರು.

ಇತ್ತ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ನಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 3 ನೇ ಸ್ಥಾನದಲ್ಲಿದ್ದರೆ, ರಿಷಬ್ ಪಂತ್ 5 ಸ್ಥಾನ ಕಳೆದುಕೊಂಡಿದ್ದು, ಇದೀಗ 11ನೇ ಸ್ಥಾನಕ್ಕೆ ತಲುಪಿದ್ದಾರೆ. ವಿರಾಟ್ ಕೊಹ್ಲಿ ಕೂಡ 6 ಸ್ಥಾನ ಕುಸಿದು 14ನೇ ಸ್ಥಾನಕ್ಕೆ ತಲುಪಿದ್ದಾರೆ. ರೋಹಿತ್ ಶರ್ಮಾ ಭಾರೀ ಹೊಡೆತ ಅನುಭವಿಸಿದ್ದು, ಇದೀಗ 9 ಸ್ಥಾನಗಳನ್ನು ಕಳೆದುಕೊಂಡಿದ್ದು 24ನೇ ಸ್ಥಾನಕ್ಕೆ ಜಾರಿದ್ದಾರೆ. ಇದಲ್ಲದೇ ಶುಭ್ಮನ್ ಗಿಲ್ ಕೂಡ 19ನೇ ಸ್ಥಾನದಿಂದ 20ನೇ ಸ್ಥಾನಕ್ಕೆ ಇಳಿದಿದ್ದಾರೆ.