AUS vs WI: ಸಿಡಿಲಬ್ಬರದ ಶತಕ ಸಿಡಿಸಿ ರೋಹಿತ್ ದಾಖಲೆ ಸರಿಗಟ್ಟಿದ ಗ್ಲೆನ್ ಮ್ಯಾಕ್ಸ್‌ವೆಲ್..!
Glenn Maxwell: ವೆಸ್ಟ್ ಇಂಡೀಸ್ ವಿರುದ್ಧ ಕೇವಲ 55 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ 12 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ಗಳ ನೆರವಿನಿಂದ 120 ರನ್ ಸಿಡಿಸಿದರು. ಈ ಮೂಲಕ ಮ್ಯಾಕ್ಸ್‌ವೆಲ್ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಅಧಿಕ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾರನ್ನು ಸರಿಗಟ್ಟಿದ್ದಾರೆ.
1 / 7
ಆಸ್ಟ್ರೇಲಿಯಾದ ಅಡಿಲೇಡ್ ಓವಲ್ನಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವನ್ನು 34 ರನ್ಗಳಿಂದ ಗೆದ್ದುಕೊಳ್ಳುವ ಮೂಲಕ ಆಸ್ಟ್ರೇಲಿಯಾ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
2 / 7
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಬರೋಬ್ಬರಿ 241 ರನ್ ಕಲೆಹಾಕಿತು. ತಂಡದ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದರು.
3 / 7
ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 55 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ 12 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ಗಳ ನೆರವಿನಿಂದ 120 ರನ್ ಸಿಡಿಸಿದರು. ಈ ಮೂಲಕ ಮ್ಯಾಕ್ಸ್‌ವೆಲ್ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ 5ನೇ ಶತಕ ಸಿಡಿಸಿದ ದಾಖಲೆ ಬರೆದರು.
4 / 7
ಇದರೊಂದಿಗೆ ಮ್ಯಾಕ್ಸ್‌ವೆಲ್ ಈ ಮಾದರಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಆಟಗಾರರ ಪೈಕಿ ಅಗ್ರಸ್ಥಾನದಲ್ಲಿರುವ ಭಾರತದ ರೋಹಿತ್ ಶರ್ಮಾ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
5 / 7
ರೋಹಿತ್ ಶರ್ಮಾ ಇತ್ತೀಚೆಗೆ ಜನವರಿಯಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಐದನೇ ಶತಕ ಸಿಡಿಸುವ ಮೂಲಕ ಚುಟುಕು ಮಾದರಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಸೃಷ್ಟಿಸಿದ್ದರು.
6 / 7
ಇದೀಗ ಮ್ಯಾಕ್ಸ್‌ವೆಲ್ ಆ ದಾಖಲೆಯನ್ನು ಸರಿಗಟ್ಟಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ನವೆಂಬರ್ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ದ್ವಿಶತಕ ಸಿಡಿಸಿದ್ದ ಅವರು ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.
7 / 7
ಆಸ್ಟ್ರೇಲಿಯಾ ಪರ ಇದುವರೆಗೆ 7 ಟೆಸ್ಟ್, 138 ಏಕದಿನ ಮತ್ತು 102 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು ಟೆಸ್ಟ್‌ನಲ್ಲಿ 339 ರನ್ ಮತ್ತು 8 ವಿಕೆಟ್‌ಗಳನ್ನು ಪಡೆದಿದ್ದರೆ, ಏಕದಿನದಲ್ಲಿ 3895 ರನ್ ಮತ್ತು 70 ವಿಕೆಟ್ಗಳನ್ನು ಪಡೆದಿದ್ದಾರೆ. ಹಾಗೆಯೇ ಟಿ20ಯಲ್ಲಿ 2405 ರನ್ ಮತ್ತು 40 ವಿಕೆಟ್ಗಳನ್ನು ಉರುಳಿಸಿದ್ದಾರೆ.