
ಸೌತ್ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಅಮೋಘ ಗೆಲುವು ದಾಖಲಿಸಿದೆ. ಈ ಅಮೋಘ ಗೆಲುವಿನೊಂದಿಗೆ ಆಸೀಸ್ ಪಡೆ ಭರ್ಜರಿ ದಾಖಲೆಯೊಂದನ್ನು ನಿರ್ಮಿಸಿದೆ. ಅದು ಸಹ ಟೀಮ್ ಇಂಡಿಯಾ ದಾಖಲೆ ಮುರಿಯುವ ಮೂಲಕ..!

ಮೆಕೆನ ಗ್ರೇಟ್ ಬಾರಿಯರ್ ಗ್ರೀಫ್ ಅರೆನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ (142), ಮಿಚೆಲ್ ಮಾರ್ಷ್ (100) ಹಾಗೂ ಕ್ಯಾಮರೋನ್ ಗ್ರೀನ್ (118) ಭರ್ಜರಿ ಶತಕ ಸಿಡಿಸಿದರು. ಈ ಶತಕಗಳ ನೆರವಿನೊಂದಿಗೆ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 431 ರನ್ ಗಳು.

432 ರನ್ ಗಳ ಕಠಿಣ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 24.5 ಓವರ್‌ಗಳಲ್ಲಿ ಕೇವಲ 155 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಆಸ್ಟ್ರೇಲಿಯಾ ತಂಡವು 276 ರನ್ ಗಳ ಪ್ರಚಂಡ ಗೆಲುವು ದಾಖಲಿಸಿದೆ. ಈ ಅಮೋಘ ಗೆಲುವಿನೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಅತ್ಯಂತ ಹೀನಾಯವಾಗಿ ಸೋಲಿಸಿದ ಹೆಗ್ಗಳಿಕೆಯೊಂದನ್ನು ಆಸ್ಟ್ರೇಲಿಯಾ ತಂಡ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಈ ಕೀರ್ತಿಯು ಟೀಮ್ ಇಂಡಿಯಾದ ಹೆಸರಿನಲ್ಲಿತ್ತು.

ಭಾರತ ತಂಡವು 2023 ರಲ್ಲಿ ಕೊಲ್ಕತ್ತಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು 243 ರನ್ಗಳ ಅಂತರದಿಂದ ಸೋಲಿಸಿದ್ದರು. ಈ ಮೂಲಕ ಸೌತ್ ಆಫ್ರಿಕಾ ವಿರುದ್ಧ ಅತ್ಯಧಿಕ ರನ್ಗಳ ಅಂತರದಿಂದ ಗೆದ್ದ ದಾಖಲೆಯನ್ನು ಟೀಮ್ ಇಂಡಿಯಾ ನಿರ್ಮಿಸಿದ್ದರು.

ಇದೀಗ ಸೌತ್ ಆಫ್ರಿಕಾ ತಂಡವನ್ನು ಬರೋಬ್ಬರಿ 276 ರನ್ಗಳ ಅಂತರದಿಂದ ಆಸ್ಟ್ರೇಲಿಯಾ ಬಗ್ಗು ಬಡಿದಿದೆ. ಈ ಮೂಲಕ ಟೀಮ್ ಇಂಡಿಯಾ ಹೆಸರಿನಲ್ಲಿದ್ದ ದಾಖಲೆ ಮುರಿದು, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಸೌತ್ ಆಫ್ರಿಕಾ ತಂಡವನ್ನು ಅತೀ ಹೆಚ್ಚು ರನ್ಗಳ ಅಂತರದಿಂದ ಸೋಲಿಸಿದ ಕೀರ್ತಿಯನ್ನು ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ.
Published On - 7:57 am, Mon, 25 August 25