
ಪಾಕಿಸ್ತಾನ್ ವಿರುದ್ಧದ ಟಿ20 ಸರಣಿಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 17 ಸದಸ್ಯರುಗಳ ಈ ತಂಡವನ್ನು ಮಿಚೆಲ್ ಮಾರ್ಷ್ ಮುನ್ನಡೆಸಲಿದ್ದಾರೆ. ಇನ್ನು ಟಿ20 ವಿಶ್ವಕಪ್ಗೆ ಆಯ್ಕೆಯಾಗಿರುವ ನಾಲ್ವರು ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿಲ್ಲ ಎಂಬುದು ವಿಶೇಷ.

ಭಾರತ-ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ಗೆ ಈಗಾಗಲೇ ಆಸ್ಟ್ರೇಲಿಯಾ ತಾತ್ಕಾಲಿಕ ತಂಡವನ್ನು ಘೋಷಿಸಲಾಗಿದೆ. ಈ ತಂಡದಲ್ಲಿ ಕಾಣಿಸಿಕೊಂಡಿದ್ ಜೋಶ್ ಹೇಝಲ್ವುಡ್, ಗ್ಲೆನ್ ಮ್ಯಾಕ್ಸ್ವೆಲ್, ಟಿಮ್ ಡೇವಿಡ್ ಹಾಗೂ ಪ್ಯಾಟ್ ಕಮಿನ್ಸ್ ಪಾಕಿಸ್ತಾನ್ ವಿರುದ್ಧದ ಸರಣಿಗೆ ಆಯ್ಕೆಯಾಗಿಲ್ಲ.

ಈ ನಾಲ್ವರನ್ನು ತಂಡದಿಂದ ಕೈ ಬಿಡಲು ಮುಖ್ಯ ಕಾರಣ ಗಾಯದ ಸಮಸ್ಯೆ. ಜೋಶ್ ಹೇಝಲ್ವುಡ್ ಅಕಿಲ್ಸ್ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಟಿಮ್ ಡೇವಿಡ್ ಭುಜದ ನೋವಿಗೆ ಒಳಗಾಗಿದ್ದಾರೆ. ಹಾಗೆಯೇ ಪ್ಯಾಟ್ ಕಮಿನ್ಸ್ ಬೆನ್ನು ನೋವಿನ ಸಮಸ್ಯೆಯಿಂದ ಇನ್ನೂ ಸಹ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಮತ್ತೊಂದೆಡೆ ಮ್ಯಾಕ್ಸ್ವೆಲ್ ಕೂಡ ಗಾಯದ ಸಮಸ್ಯೆಗೀಡಾಗಿದ್ದಾರೆ. ಹೀಗಾಗಿ ಈ ನಾಲ್ವರನ್ನು ಪಾಕ್ ವಿರುದ್ಧದ ಸರಣಿಯಿಂದ ಹೊರಗಿಡಲಾಗಿದೆ.

ಇನ್ನು ಫೆಬ್ರವರಿ 7 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ಗೂ ಮುನ್ನ ನಾಲ್ವರು ಸಂಪೂರ್ಣ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದೆ ಕ್ರಿಕೆಟ್ ಆಸ್ಟ್ರೇಲಿಯಾ. ಒಂದು ವೇಳೆ ಟಿ20 ವಿಶ್ವಕಪ್ ಮೊದಲ ಸುತ್ತಿನ ಪಂದ್ಯಗಳ ವೇಳೆ ಸಂಪೂರ್ಣ ಫಿಟ್ನೆಸ್ ಸಾಧಿಸಲು ಸಾಧ್ಯವಾಗದೇ ಇದ್ದರೆ ಮಾತ್ರ ಬದಲಿ ಆಟಗಾರರನ್ನು ಆಯ್ಕೆ ಮಾಡಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ.

ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಶಾನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಮಹ್ಲಿ ಬಿಯರ್ಡ್‌ಮನ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಜ್ಯಾಕ್ ಎಡ್ವರ್ಡ್ಸ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಜೋಶ್ ಫಿಲಿಪಿ, ಮ್ಯಾಥ್ಯೂ ರೆನ್‌ಶಾ, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ.