ವಿಶ್ವಕಪ್ 2023 ರ ರೋಚಕತೆ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಪಂದ್ಯಾವಳಿಯ ಆರಂಭದ ಮೊದಲು, ಪ್ರತಿ ತಂಡದಲ್ಲೂ ಗಾಯಾಳುಗಳ ಪಟ್ಟಿ ತುಂಬಾ ದೊಡ್ಡದಿದೆ. ಇದಕ್ಕೆ ಆಸ್ಟ್ರೇಲಿಯಾ ತಂಡ ಕೂಡ ಹೊರತಾಗಿಲ್ಲ. ಈ ಪೈಕಿ ಕೆಲವು ಆಟಗಾರರು ಈಗ ಫಿಟ್ ಆಗಿದ್ದು, ತಂಡಕ್ಕೆ ಮರಳಿದ್ದಾರೆ. ಆದರೆ ಇನ್ನೂ ಕೆಲವು ಆಟಗಾರರು ಗಾಯಗಳಿಂದ ಬಳಲುತ್ತಿದ್ದಾರೆ.
ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಗಾಯದ ಸಮಸ್ಯೆಯಿಂದಾಗಿ ತಂಡದ ಮ್ಯಾಚ್‌ವಿನ್ನರ್ ಎನಿಸಿಕೊಂಡಿರುವ ಆಶ್ಟನ್ ಅಗರ್ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ತಂಡದ ಪರ ಭಾರತೀಯ ಮೈದಾನಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅಗರ್ ಅಲಭ್ಯತೆ ಆಸೀಸ್ಗೆ ಹಿನ್ನಡೆಯನ್ನುಂಟು ಮಾಡಿದೆ.
ಆಶ್ಟನ್ ಅಗರ್ ಅವರು ಈ ಹಿಂದೆ ಗಾಯಗೊಂಡಿದ್ದರು. ಆದರೆ ಅವರು ವಿಶ್ವಕಪ್‌ನಿಂದ ಫಿಟ್ ಆಗುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಗಾಯದಿಂದ ಅವರಿನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಆಷ್ಟನ್ ಅಗರ್ ಇಡೀ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಕಾಂಗರೂಗಳು ಈಗಾಗಲೇ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕಳೆದುಕೊಂಡಿದ್ದಾರೆ. ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ತಂಡ ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಬೇಕಾಯಿತು.
ಇದೀಗ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಮೊದಲ ಪಂದ್ಯವೂ ಭಾರತದ ವಿರುದ್ಧವೇ ಆಗಿದ್ದು, ಉಭಯ ತಂಡಗಳ ಮೊದಲ ಪಂದ್ಯ ಅಕ್ಟೋಬರ್ 8 ರಂದು ನಡೆಯಲ್ಲಿದೆ. ಇದಕ್ಕೂ ಮುನ್ನ ಕಾಂಗರೂ ತಂಡ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಇದರಲ್ಲಿ ಸೆಪ್ಟೆಂಬರ್ 30 ರಂದು ನೆದರ್ಲೆಂಡ್ಸ್ ವಿರುದ್ಧ ಒಂದು ಪಂದ್ಯ ಹಾಗೂ ಅಕ್ಟೋಬರ್ 3 ರಂದು ಪಾಕಿಸ್ತಾನ ತಂಡದ ವಿರುದ್ಧ ಮತ್ತೊಂದು ಪಂದ್ಯ ನಡೆಯಲಿದೆ.
ಆಸ್ಟ್ರೇಲಿಯಾ ವಿಶ್ವಕಪ್ ತಂಡ 2023: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ , ಮಿಚೆಲ್ ಸ್ಟಾರ್ಕ್.