Babar Azam: ಪಾಕ್ ತಂಡಕ್ಕೆ ಮತ್ತೆ ಬಾಬರ್ ಆಝಂ ನಾಯಕ
TV9 Web | Updated By: ಝಾಹಿರ್ ಯೂಸುಫ್
Updated on:
Mar 31, 2024 | 11:39 AM
Babar Azam: ಬಾಬರ್ ಆಝಂ ಪಾಕಿಸ್ತಾನ್ ತಂಡವನ್ನು 133 ಪಂದ್ಯಗಳಲ್ಲಿ ಮುನ್ನಡೆಸಿರುವ ಅನುಭವ ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ಪಾಕ್ ಪಡೆ 78 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 43 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಅಂದರೆ ಇಲ್ಲಿ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಬಾಬರ್ ಆಝಂ ಉತ್ತಮ ಗೆಲುವಿನ ಶೇಕಡಾವರು ಹೊಂದಿದ್ದಾರೆ,
1 / 5
ಪಾಕಿಸ್ತಾನ್ ತಂಡದ ನಾಯಕನಾಗಿ ಬಾಬರ್ ಆಝಂ (Babar Azam) ಮತ್ತೆ ನೇಮಕವಾಗಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೂ ಮುಂಚಿತವಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತಂಡದ ನಾಯಕನನ್ನು ಬದಲಿಸಿದ್ದು, ಅದರಂತೆ ಇದೀಗ ಬಾಬರ್ಗೆ ಮತ್ತೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ.
2 / 5
ಇದಕ್ಕೂ ಮುನ್ನ, 2023 ರಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡ ಹೀನಾಯ ಪ್ರದರ್ಶನ ನೀಡಿತ್ತು. ಈ ಹಿನ್ನಲೆಯಲ್ಲಿ ಬಾಬರ್ ಆಝಂ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಅಲ್ಲದೆ ಟಿ20 ತಂಡ ಹಾಗೂ ಏಕದಿನ ತಂಡಗಳಿಗೆ ಶಾಹೀನ್ ಅಫ್ರಿದಿಯನ್ನು ಹಾಗೂ ಟೆಸ್ಟ್ ಕ್ರಿಕೆಟ್ಗೆ ಶಾನ್ ಮಸೂದ್ ಅವರನ್ನು ಹೊಸ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.
3 / 5
ಅದರಂತೆ ಶಾಹೀನ್ ಅಫ್ರಿದಿ ನಾಯಕತ್ವದಲ್ಲಿ ನ್ಯೂಝಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡಿರುವ ಪಾಕಿಸ್ತಾನ್ ತಂಡವು 4-1 ಅಂತರದಿಂದ ಸೋಲನುಭವಿಸಿದೆ. ಇನ್ನು ಶಾನ್ ಮಸೂದ್ ಮುಂದಾಳತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕ್ ತಂಡವು 3-0 ಅಂತರದಿಂದ ಮುಗ್ಗರಿಸಿಕೊಂಡಿದೆ. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನಲ್ಲಿ ಮತ್ತೆ ನಾಯಕತ್ವದ ಬದಲಾವಣೆ ಬಗ್ಗೆ ಕೂಗುಗಳೆದ್ದಿದ್ದವು.
4 / 5
ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹೊಸ ಅಧ್ಯಕ್ಷರಾದ ಸೈಯದ್ ಮೊಹ್ಸಿನ್ ರಾಝ ನಖ್ವಿ ಅವರು ಪಾಕ್ ತಂಡದ ನೂತನ ನಾಯಕರಾಗಿ ಬಾಬರ್ ಆಝಂ ಅವರನ್ನು ಮತ್ತೆ ನೇಮಕ ಮಾಡಿದ್ದಾರೆ. ಅದರಂತೆ ಟಿ20 ಮತ್ತು ಏಕದಿನ ತಂಡಗಳನ್ನು ಬಾಬರ್ ಮುನ್ನಡೆಸಲಿದ್ದು, ಟೆಸ್ಟ್ ತಂಡದ ನಾಯಕರಾಗಿ ಶಾನ್ ಮಸೂದ್ ಮುಂದುವರೆಯುವ ಸಾಧ್ಯತೆಯಿದೆ.
5 / 5
ಇತ್ತ ಬಾಬರ್ ಆಝಂ ಪಾಕಿಸ್ತಾನ್ ತಂಡವನ್ನು 133 ಪಂದ್ಯಗಳಲ್ಲಿ ಮುನ್ನಡೆಸಿರುವ ಅನುಭವ ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ಪಾಕ್ ಪಡೆ 78 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 43 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಈ ಮೂಲಕ ಪಾಕಿಸ್ತಾನ್ ತಂಡದ ಯಶಸ್ವಿ ನಾಯಕರಲ್ಲಿ ಬಾಬರ್ ಆಝಂ ಗುರುತಿಸಿಕೊಂಡಿದ್ದಾರೆ. ಇದೇ ಕಾರಣದಿಂದಾಗಿ ಟಿ20 ವಿಶ್ವಕಪ್ಗೂ ಮುನ್ನ ಮತ್ತೆ ಅವರಿಗೆ ನಾಯಕನ ಸ್ಥಾನ ನೀಡಲಾಗಿದೆ.
Published On - 10:52 am, Sun, 31 March 24