Babar Azam: ಸ್ಪೋಟಕ ಶತಕದೊಂದಿಗೆ ದಾಖಲೆ ಬರೆದ ಬಾಬರ್ ಆಝಂ
TV9 Web | Updated By: ಝಾಹಿರ್ ಯೂಸುಫ್
Updated on:
Feb 27, 2024 | 9:33 AM
Babar Azam: ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಬಾಬರ್ ಆಝಂ ವಿಶೇಷ ದಾಖಲೆ ಬರೆದಿದ್ದಾರೆ. ಈ ಶತಕದೊಂದಿಗೆ ಈ ಸಾಧನೆ ಮಾಡಿದ ಏಷ್ಯಾದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಕ್ರಿಸ್ ಗೇಲ್ ಬಳಿಕ ಈ ದಾಖಲೆ ಬರೆದ ವಿಶ್ವದ 2ನೇ ಬ್ಯಾಟರ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
1 / 7
ಪಾಕಿಸ್ತಾನ್ ಸೂಪರ್ ಲೀಗ್ನ 13ನೇ ಪಂದ್ಯದಲ್ಲಿ ಬಾಬರ್ ಆಝಂ (Babar Azam) ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ. ಲಾಹೋರ್ನಲ್ಲಿ ನಡೆದ ಈ ಪಂದ್ಯದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಪೇಶಾವರ್ ಝಲ್ಮಿ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಇಸ್ಲಾಮಾಬಾದ್ ಯುನೈಟೆಡ್ ತಂಡವು ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿತು.
2 / 7
ಇನಿಂಗ್ಸ್ ಆರಂಭಿಸಿದ ಪೇಶಾವರ್ ಝಲ್ಮಿ ತಂಡಕ್ಕೆ ನಾಯಕ ಬಾಬರ್ ಆಝಂ ಸೈಮ್ ಅಯ್ಯೂಬ್ (38) ಉತ್ತಮ ಆರಂಭ ಒದಗಿಸಿದ್ದರು. ಅದರಲ್ಲೂ ತಂಡದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡ ಬಾಬರ್ ಆಝಂ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
3 / 7
ಹಾಫ್ ಸೆಂಚುರಿ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಬಾಬರ್ ಆಝಂ ಕೇವಲ 59 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿದರು. ಅಲ್ಲದೆ 63 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ ಅಜೇಯ 111 ರನ್ ಬಾರಿಸಿದರು. ಈ ಶತಕದ ನೆರವಿನಿಂದ ಪೇಶಾವರ್ ಝಲ್ಮಿ ತಂಡವು 5 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿತು.
4 / 7
ವಿಶೇಷ ಎಂದರೆ ಈ ಶತಕದೊಂದಿಗೆ ಟಿ20 ಕ್ರಿಕೆಟ್ನಲ್ಲಿ 10 ಕ್ಕಿಂತ ಹೆಚ್ಚು ಸೆಂಚುರಿ ಸಿಡಿಸಿದ ಏಷ್ಯಾದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಬಾಬರ್ ಆಝಂ ಪಾತ್ರರಾಗಿದ್ದಾರೆ. ಇದರ ಜೊತೆಗೆ ಅತೀ ಹೆಚ್ಚು ಟಿ20 ಸೆಂಚುರಿ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
5 / 7
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಯೂನಿವರ್ಸ್ ಬಾಸ್ ಕ್ರಿಸ್ ಗೇಲ್. 463 ಟಿ20 ಪಂದ್ಯಗಳನ್ನಾಡಿರುವ ಗೇಲ್ ಒಟ್ಟು 22 ಶತಕಗಳನ್ನು ಬಾರಿಸಿ ವಿಶ್ವ ದಾಖಲೆ ಬರೆದಿಟ್ಟಿದ್ದಾರೆ. ಇದೀಗ ಬಾಬರ್ ಆಝಂ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.
6 / 7
284 ಟಿ20 ಪಂದ್ಯಗಳನ್ನಾಡಿರುವ ಬಾಬರ್ ಆಝಂ ಇದುವರೆಗೆ 11 ಶತಕಗಳನ್ನು ಬಾರಿಸಿದ್ದಾರೆ. ಬಾಬರ್ ಅವರನ್ನು ಹೊರತುಪಡಿಸಿ ಏಷ್ಯಾದ ಯಾವುದೇ ಬ್ಯಾಟರ್ 10 ಕ್ಕಿಂತ ಹೆಚ್ಚು ಟಿ20 ಶತಕಗಳನ್ನು ಬಾರಿಸಿಲ್ಲ ಎಂಬುದು ವಿಶೇಷ.
7 / 7
ಇನ್ನು ಈ ಪಂದ್ಯದಲ್ಲಿ 202 ರನ್ಗಳ ಗುರಿ ಪಡೆದ ಇಸ್ಲಾಮಾಬಾದ್ ಯುನೈಟೆಡ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 193 ರನ್ ಕಲೆಹಾಕಲಷ್ಟೇ ಶಕ್ತರಾದರು. ಈ ಮೂಲಕ ಪೇಶಾವರ್ ಝಲ್ಮಿ ತಂಡವು 8 ರನ್ಗಳ ರೋಚಕ ಜಯ ಸಾಧಿಸಿತು.