- Kannada News Photo gallery Cricket photos IND vs ENG team india wins 4th test series in rohit sharma captaincy
Rohit Sharma: 5 ಸರಣಿ.. ಒಂದೇ ಒಂದು ಸೋಲಿಲ್ಲ..! ಅಜೇಯ ನಾಯಕ ರೋಹಿತ್
Rohit Sharma: ನಾಯಕನಾಗಿ ರೋಹಿತ್ ಶರ್ಮಾಗೆ ಇದು 5ನೇ ಟೆಸ್ಟ್ ಸರಣಿಯಾಗಿದೆ. ರೋಹಿತ್ ಭಾರತ ಟೆಸ್ಟ್ ತಂಡದ ನಾಯಕನಾದ ಬಳಿಕ ಟೀಂ ಇಂಡಿಯಾ ಒಂದೇ ಒಂದು ಸರಣಿಯನ್ನು ಕಳೆದುಕೊಂಡಿಲ್ಲ. ಇದು ಸ್ವತಃ ಒಂದು ದಾಖಲೆಯಾಗಿದೆ.
Updated on:Feb 26, 2024 | 5:09 PM

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿರುವ ಟೀಂ ಇಂಡಿಯಾ, ತವರಿನಲ್ಲಿ ದಾಖಲೆಯ 17ನೇ ಟೆಸ್ಟ್ ಸರಣಿಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಈ ಮೂಲಕ ಕೊಹ್ಲಿ ಬಳಿಕ ಟೆಸ್ಟ್ ತಂಡದ ನಾಯಕತ್ವವಹಿಸಿಕೊಂಡಿರುವ ರೋಹಿತ್ ಶರ್ಮಾ ಕೂಡ ತಮ್ಮ ಅಜೇಯ ಓಟವನ್ನು ಮುಂದುವರೆಸಿದ್ದಾರೆ.

ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬಳಿಕ 2022 ರ ಫೆಬ್ರವರಿಯಂದು ಭಾರತ ಟೆಸ್ಟ್ ತಂಡದ ನಾಯಕತ್ವವಹಿಸಿಕೊಂಡಿರುವ ರೋಹಿತ್ ಶರ್ಮಾ, ಇದೇ ಮೊದಲ ಬಾರಿಗೆ ತಮ್ಮ ನಾಯಕತ್ವದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸಿದ್ದಾರೆ.

ವಾಸ್ತವವಾಗಿ ನಾಯಕನಾಗಿ ರೋಹಿತ್ ಶರ್ಮಾಗೆ ಇದು 5ನೇ ಟೆಸ್ಟ್ ಸರಣಿಯಾಗಿದೆ. ರೋಹಿತ್ ಭಾರತ ಟೆಸ್ಟ್ ತಂಡದ ನಾಯಕನಾದ ಬಳಿಕ ಟೀಂ ಇಂಡಿಯಾ ಒಂದೇ ಒಂದು ಸರಣಿಯನ್ನು ಕಳೆದುಕೊಂಡಿಲ್ಲ. ಇದು ಸ್ವತಃ ಒಂದು ದಾಖಲೆಯಾಗಿದೆ.

2022 ರಿಂದ ಒಟ್ಟು 5 ಟೆಸ್ಟ್ ಸರಣಿಗಳ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ ಟೀಂ ಇಂಡಿಯಾವನ್ನು ಒಂದೇ ಒಂದು ಸರಣಿ ಸೋಲದಂತೆ ಮುನ್ನಡೆಸಿದ್ದಾರೆ. ಈ 5 ಸರಣಿಗಳಲ್ಲಿ ಭಾರತ 4 ಸರಣಿ ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಒಂದು ಸರಣಿ ಡ್ರಾ ಆಗಿದೆ.

ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡದ ಖಾಯಂ ನಾಯಕನಾಗಿ ಆಯ್ಕೆಯಾದ ಬಳಿಕ ಟೀಂ ಇಂಡಿಯಾ, ಮೊದಲು ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿತ್ತು. ಇದರ ನಂತರ, ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ಸರಣಿಯಲ್ಲೂ ಭಾರತ ಕಾಂಗರೂ ತಂಡವನ್ನು 2-1 ಅಂತರದಿಂದ ಸೋಲಿಸಿತ್ತು.

ಆ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ, ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟೆಸ್ಟ್ ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದರೆ, ಎರಡನೇ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಈ ಮೂಲಕ ಭಾರತ ಸರಣಿಯನ್ನು 1-0 ಅಂತರದಿಂದ ಕೈವಶ ಮಾಡಿಕೊಂಡಿತ್ತು.

ಇದಾದ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಿದ್ದ ಟೀಂ ಇಂಡಿಯಾ, ಮೊದಲ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಆದರೆ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಅದ್ಭುತ ಪುನರಾಗಮನ ಮಾಡಿ ಪಂದ್ಯವನ್ನು ಗೆದ್ದುಕೊಂಡಿತು. ಈ ಮೂಲಕ ಈ ಸರಣಿಯನ್ನು ಡ್ರಾ ಮಾಡಿಕೊಂಡಿತ್ತು.

ಇದೀಗ ಭಾರತ ತಂಡ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನೂ ಗೆದ್ದುಕೊಂಡಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ನಾಲ್ಕನೇ ಸರಣಿಯನ್ನು ಗೆದ್ದುಕೊಂಡಿದೆ. ಇನ್ನು ಸರಣಿಯಲ್ಲಿ ಉಳಿದಿರುವ ಕೊನೆಯ ಪಂದ್ಯದಲ್ಲೂ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗುತ್ತದೆಯೇ ಅಥವಾ ಆಂಗ್ಲರ ತಂಡ ತಿರುಗೇಟು ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
Published On - 5:08 pm, Mon, 26 February 24



















