ಪಾಕಿಸ್ತಾನ್ ಟೆಸ್ಟ್ ತಂಡದಿಂದ ಬಾಬರ್ ಆಝಂ ಹೊರಬಿದ್ದ ಬೆನ್ನಲ್ಲೇ ಹೊಸ ಚರ್ಚೆಯೊಂದು ಶುರುವಾಗಿದೆ. ಈ ಚರ್ಚೆಗಳ ನಡುವೆ ಪಾಕಿಸ್ತಾನ್ ತಂಡದ ಸಹಾಯಕ ಕೋಚ್ ಅಝರ್ ಮಹಮೂದ್ ನೀಡಿದ ಹೇಳಿಕೆಯೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅವರ ಹೇಳಿಕೆಯಂತೆ ಬಾಬರ್ ಆಝಂ ಅವರನ್ನು ತಂಡದಿಂದ ಕೈ ಬಿಡಲಾಗಿಲ್ಲ. ಬದಲಾಗಿ ವಿಶ್ರಾಂತಿ ನೀಡಲಾಗಿದೆಯಂತೆ.
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಅಝರ್ ಮಹಮೂದ್ಗೆ ಬಾಬರ್ ಆಝಂ ಅವರನ್ನು ಕೈ ಬಿಟ್ಟಿರುವ ಬಗ್ಗೆ ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಅಝರ್, ನಾವು ಬಾಬರ್ನನ್ನು ತಂಡದಿಂದ ಕೈ ಬಿಟ್ಟಿಲ್ಲ. ಆತ ನಂಬರ್ 1 ಆಟಗಾರ. ಹೀಗಾಗಿ ಅವರಿಗೆ ವಿಶ್ರಾಂತಿ ನೀಡಿದ್ದೇವೆ ಎಂದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ಪಾಕಿಸ್ತಾನ್ ತಂಡ ಮತ್ತಷ್ಟು ಪಂದ್ಯಳನ್ನಾಡಬೇಕಿದೆ. ಹೀಗಾಗಿ ಪ್ರಮುಖ ಆಟಗಾರರಿಗೆ ವಿಶ್ರಾಂತಿಯ ಅಗತ್ಯತೆಯಿತ್ತು. ಇದಾಗ್ಯೂ ಬಾಬರ್ ಆಝಂ ಆಡಲು ಸಿದ್ಧರಿದ್ದರು. ಆದರೆ ಅವರಿಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯೇ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದೆ ಎಂದು ಅಝರ್ ಮಹಮೂದ್ ತಿಳಿಸಿದ್ದಾರೆ.
ಇದೀಗ ಪಾಕ್ ತಂಡದ ಸಹಾಯಕ ಕೋಚ್ ನೀಡಿದ ಹೇಳಿಕೆಯು ನಗೆಪಾಟಲಿಗೀಡಾಗಿದೆ. ಏಕೆಂದರೆ ಪಾಕಿಸ್ತಾನ್ ತಂಡವು ತವರಿನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದು ಮೂರು ವರ್ಷಗಳೇ ಕಳೆದಿವೆ. ಅದರಲ್ಲೂ ಬಾಂಗ್ಲಾದೇಶ್ ವಿರುದ್ಧ ಹೀನಾಯವಾಗಿ ಸೋತಿದ್ದ ಪಾಕಿಸ್ತಾನ್, ಇಂಗ್ಲೆಂಡ್ ವಿರುದ್ಧ ಕೂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಮಾನಕರವಾಗಿ ಸೋತಿದೆ.
ಹೀಗೆ ಸೋಲಿನ ಸರಪಳಿಗೆ ಸಿಲುಕಿರುವ ಪಾಕಿಸ್ತಾನ್ ತಂಡವು ಒಂದೇ ಒಂದು ಜಯಕ್ಕಾಗಿ ಪರಿತಪಿಸುತ್ತಿದೆ. ಅಂತದ್ರಲ್ಲಿ ಮುಂದಿನ ಪಂದ್ಯಗಳಿಗಾಗಿ ನಂಬರ್-1 ಬ್ಯಾಟರ್ಗೆ ವಿಶ್ರಾಂತಿ ನೀಡಿದ್ದೇವೆ ಎಂದೇಳುವ ಮೂಲಕ ಪಾಕ್ ಕೋಚ್ ಅಝರ್ ಮಹಮೂದ್ ನಗೆಪಾಟಲಿಗೀಡಾಗಿದ್ದಾರೆ.
ಅಂದಹಾಗೆ ಬಾಬರ್ ಆಝಂ ಅವರನ್ನು ಪಾಕ್ ತಂಡದಿಂದ ಕೈ ಬಿಡಲು ಮುಖ್ಯ ಕಾರಣ ಕಳಪೆ ಫಾರ್ಮ್ನಲ್ಲಿರುವುದು. ಟೆಸ್ಟ್ ಕ್ರಿಕೆಟ್ನಲ್ಲಿ ಬಾಬರ್ ಅರ್ಧಶತಕ ಬಾರಿಸಿ 2 ವರ್ಷಗಳೇ ಕಳೆದಿವೆ. ಅದರಲ್ಲೂ ರನ್ ಮಳೆಯೇ ಹರಿದಿರುವ ಮುಲ್ತಾನ್ ಟೆಸ್ಟ್ನಲ್ಲಿ ಬಾಬರ್ ಆಝಂ ಕಲೆಹಾಕಿದ್ದು ಕೇವಲ 35 ರನ್ಗಳು ಮಾತ್ರ. ಅಲ್ಲದೆ ಕಳೆದ 18 ಇನಿಂಗ್ಸ್ಗಳಿಂದ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಹೀಗಾಗಿಯೇ ಬಾಬರ್ ಆಝಂಗೆ ಟೆಸ್ಟ್ ತಂಡದಿಂದ ಗೇಟ್ ಪಾಸ್ ನೀಡಲಾಗಿದೆ.