
ಬಾಂಗ್ಲಾದೇಶ 2026 ರ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ. ಭದ್ರತಾ ಕಾರಣಗಳಿಂದಾಗಿ ತಂಡವನ್ನು ಭಾರತಕ್ಕೆ ಕಳುಹಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿರಾಕರಿಸಿದೆ. ಈ ಬಗ್ಗೆ ಪತ್ರಿಕೆಗಳಿಗೆ ಹೇಳಿಕೆ ನೀಡಿರುವ ಬಾಂಗ್ಲಾದೇಶದ ಯುವಜನ ಮತ್ತು ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಭಾರತದ ಭದ್ರತಾ ಪರಿಸ್ಥಿತಿ ಬದಲಾಗಿಲ್ಲ. ಹೀಗಾಗಿ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುತ್ತಿಲ್ಲ ಎಂದಿದ್ದರು.

ವಾಸ್ತವವಾಗಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದರಿಂದ, ಬಾಂಗ್ಲಾದೇಶದ ಗುಂಪು ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಿಸಿಬಿ, ಐಸಿಸಿಯನ್ನು ಕೋರಿತ್ತು. ಆದಾಗ್ಯೂ, ಐಸಿಸಿ ಮಂಡಳಿಯ ಸಭೆಯು ಭಾರತದಲ್ಲಿ ಯಾವುದೇ ಭದ್ರತಾ ಬೆದರಿಕೆ ಇಲ್ಲ ಎಂದು ಹೇಳಿ ಈ ಪ್ರಸ್ತಾಪವನ್ನು ತಿರಸ್ಕರಿಸಿತು.

ಮಾತ್ರವಲ್ಲದೆ ಬಾಂಗ್ಲಾ ತಂಡ ಭಾರತಕ್ಕೆ ಪ್ರಯಾಣಿಸದಿದ್ದರೆ, ನಿಮ್ಮ ಸ್ಥಾನದಲ್ಲಿ ಬೇರೆ ತಂಡವನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡಲಾಗುತ್ತದೆ ಎಂದು ಐಸಿಸಿ, ಬಿಸಿಬಿಗೆ ಎಚ್ಚರಿಕೆ ನೀಡಿತ್ತು. ಇದರ ಹೊರತಾಗಿಯೂ, ಬಾಂಗ್ಲಾದೇಶ ತನ್ನ ನಿಲುವು ಬದಲಾಯಿಸದೆ ಪಂದ್ಯಾವಳಿಯಿಂದ ಹಿಂದೆ ಸರಿಯಲು ನಿರ್ಧರಿಸಿದೆ.

ಈ ನಿರ್ಧಾರದಿಂದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಭಾರೀ ಬೆಲೆಯನ್ನು ತೆರಬೇಕಾಗಿದೆ. ಐಸಿಸಿಯಿಂದ ಬರುವ ವಾರ್ಷಿಕ ಆದಾಯದ ಪಾಲಿನಲ್ಲಿ ಸುಮಾರು 3.25 ಬಿಲಿಯನ್ ಬಾಂಗ್ಲಾದೇಶಿ ಟಾಕಾ (ಸುಮಾರು 240 ಕೋಟಿ ಭಾರತೀಯ ರೂಪಾಯಿಗಳು) ನಷ್ಟವಾಗಬಹುದು ಎಂದು ವರದಿಯಾಗಿದೆ.

ಇದಲ್ಲದೆ, ಪ್ರಸಾರ ಹಕ್ಕುಗಳು, ಪ್ರಾಯೋಜಕತ್ವಗಳು ಮತ್ತು ಇತರ ಗಳಿಕೆಗಳಿಂದ ಬರುವ ಒಟ್ಟು ಆರ್ಥಿಕ ನಷ್ಟವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 60 ಅಥವಾ ಅದಕ್ಕಿಂತ ಹೆಚ್ಚಾಗಬಹುದು. ಇದರ ಜೊತೆಗೆ ಆಟಗಾರರಿಗೆ ಸಿಗುತ್ತಿದ್ದ ಪಂದ್ಯ ಶುಲ್ಕ, ಬೋನಸ್ ಮತ್ತು ಬಹುಮಾನದ ಹಣಕ್ಕೂ ಕತ್ತರಿ ಬಿದ್ದಿದೆ.

ಈ ವಿವಾದವು ದ್ವಿಪಕ್ಷೀಯ ಕ್ರಿಕೆಟ್ ಮೇಲೂ ಪರಿಣಾಮ ಬೀರಬಹುದು. ಪೂರ್ವ ನಿಗದಿಯಂತೆ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಭಾರತ ತಂದ ಬಾಂಗ್ಲಾದೇಶ ಪ್ರವಾಸವನ್ನು ಮಾಡಬೇಕಿತ್ತು. ಆದರೀಗ ಆ ಪ್ರವಾಸ ರದ್ದಾಗಬಹುದು. ಇದರಿಂದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಮತ್ತಷ್ಟು ನಷ್ಟಕ್ಕೆ ಕಾರಣವಾಗಬಹುದು. ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು 2025 ಕ್ಕೆ ನಿಗದಿಪಡಿಸಲಾಗಿತ್ತು, ಆದರೆ ಬಿಸಿಸಿಐ ಅದನ್ನು ಮುಂದೂಡಿತ್ತು. ಆದಾಗ್ಯೂ, ಈ ತಿಂಗಳ ಆರಂಭದಲ್ಲಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪ್ರವಾಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತಾದರೂ ಅದು ನಡೆಯುವ ಸಾಧ್ಯತೆಗಳಿಲ್ಲ.
Published On - 3:18 pm, Fri, 23 January 26