Ajit Agarkar New Chief Selector: ಟೀಂ ಇಂಡಿಯಾದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ
Ajit Agarkar New Chief Selector: ಭಾರತದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಟೀಂ ಇಂಡಿಯಾ ಆಯ್ಕೆ ಮಂಡಳಿಯ ಮುಖ್ಯ ಆಯ್ಕೆಗಾರರಾಗಿ ಅಧಿಕಾರವಹಿಸಿಕೊಳ್ಳಲಿದ್ದು, ಜುಲೈ 5 ರಿಂದ ಅವರ ಅಧಿಕಾರಾವಧಿ ಆರಂಭವಾಗಲಿದೆ.
1 / 8
ಭಾರತದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಟೀಂ ಇಂಡಿಯಾ ಆಯ್ಕೆ ಮಂಡಳಿಯ ಮುಖ್ಯ ಆಯ್ಕೆಗಾರರಾಗಿ ಅಧಿಕಾರವಹಿಸಿಕೊಳ್ಳಲಿದ್ದು, ಜುಲೈ 5ರಿಂದ ಅವರ ಅಧಿಕಾರಾವಧಿ ಆರಂಭವಾಗಲಿದೆ. ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ. ಇದೀಗ ಅಜಿತ್ ಅಗರ್ಕರ್ ಏಷ್ಯಾಕಪ್ ಮತ್ತು ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲಿದ್ದಾರೆ.
2 / 8
ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಣಿಪೆ ಅವರನ್ನೊಳಗೊಂಡ 3 ಸದಸ್ಯರ ಸಿಎಸಿ ಸಮಿತಿಯು ಸಂದರ್ಶನವನ್ನು ನಡೆಸಿದ ನಂತರ ಅಜಿತ್ ಅಗರ್ಕರ್ ಅವರ ಹೆಸರನ್ನು ಈ ಹುದ್ದೆಗೆ ಶಿಫಾರಸು ಮಾಡಿತ್ತು. ಕಳೆದ ಹಲವು ದಿನಗಳಿಂದ ಕೂಡ ಅಜಿತ್ ಅಗರ್ಕರ್ ಅವರ ಹೆಸರೇ ಈ ಹುದ್ದೆಗೆ ಅಂತಿಮವೆಂಬ ಮಾತು ಕೇಳಿಬರುತ್ತಿತ್ತು.
3 / 8
ವಾಸ್ತವವಾಗಿ, ಕಳೆದ ಫೆಬ್ರವರಿಯಲ್ಲಿ ಖಾಸಗಿ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಬಿಸಿಸಿಐ ವಿರುದ್ಧ ಕೆಲವು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೀಗಾಗಿ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದೀಗ ಅವರ ಬದಲಿಗೆ ಅಗರ್ಕರ್ ಈ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
4 / 8
ಇನ್ನು ಅಜಿತ್ ಅಗರ್ಕರ್ ವೃತ್ತಿ ಜೀವನದ ಬಗ್ಗೆ ಹೇಳಬೇಕೆಂದರೆ, ಭಾರತದ ಈ ಮಾಜಿ ಆಲ್‌ರೌಂಡರ್ ಟೀಂ ಇಂಡಿಯಾ ಪರ 26 ಟೆಸ್ಟ್, 191 ಏಕದಿನ ಮತ್ತು 4 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ಅಗರ್ಕರ್ 2007ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರೂ ಆಗಿದ್ದರು.
5 / 8
ಹಾಗೆಯೇ ವೃತ್ತಿ ಬದುಕಿನಲ್ಲಿ ಹಲವಾರು ದಾಖಲೆ ಬರೆದಿರುವ ಅಗರ್ಕರ್, ಏಕದಿನದಲ್ಲಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿದ್ದಾರೆ. 2000ನೇ ಇಸವಿಯಲ್ಲಿ ಜಿಂಬಾಬ್ವೆ ವಿರುದ್ಧ 21 ಎಸೆತಗಳಲ್ಲಿ ಅಜಿತ್ ಫಿಫ್ಟಿ ಬಾರಿಸಿದ್ದರು.
6 / 8
ಅಷ್ಟೇ ಅಲ್ಲ, ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗದ 50 ವಿಕೆಟ್ ಪಡೆದ ದಾಖಲೆಯೂ ಬಹುಕಾಲ ಅಜಿತ್ ಅವರ ಹೆಸರಿನಲ್ಲಿತ್ತು. ಅಗರ್ಕರ್ ಕೇವಲ 23 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಅಗರ್ಕರ್ ಮುಂಬೈ ಹಿರಿಯರ ತಂಡದ ಮುಖ್ಯ ಆಯ್ಕೆಗಾರರಾಗಿ ಸೇವೆ ಸಲ್ಲಿಸಿದ್ದರು.
7 / 8
ಇದಲ್ಲದೆ ಐಪಿಎಲ್ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದ ಅಗರ್ಕರ್, ಸಹಾಯಕ ಬೌಲಿಂಗ್ ಕೋಚ್ ಆಗಿದ್ದರು. ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಗರ್ಕರ್ಗೆ ವೆಸ್ಟ್ ಇಂಡೀಸ್ ವಿರುದ್ಧದ 5 ಟಿ20 ಪಂದ್ಯಗಳ ಸರಣಿಗೆ ತಂಡವನ್ನು ಆಯ್ಕೆ ಮಾಡುವುದು ಅವರ ಮುಂದಿರುವ ಮೊದಲ ಸವಾಲಾಗಿದೆ. ಹಾಗೆಯೇ ಈ ವರ್ಷ ಅವರ ಮುಂದಿರುವ ದೊಡ್ಡ ಸವಾಲೆಂದರೆ ಏಷ್ಯಾಕಪ್ ಮತ್ತು ನಂತರ ವಿಶ್ವಕಪ್‌ಗೆ ತಂಡವನ್ನು ಆಯ್ಕೆ ಮಾಡುವುದು.
8 / 8
ಟೀಂ ಇಂಡಿಯಾದ ಆಯ್ಕೆ ಸಮಿತಿ - ಅಜಿತ್ ಅಗರ್ಕರ್ (ಅಧ್ಯಕ್ಷ), ಶಿವಸುಂದರ್ ದಾಸ್, ಸುಬ್ರೋತೊ ಬ್ಯಾನರ್ಜಿ, ಸಲೀಲ್ ಅಂಕೋಲಾ, ಎಸ್ ಶರತ್
Published On - 7:31 am, Wed, 5 July 23