Updated on: Apr 17, 2023 | 4:05 PM
ದೇಶಿಯ ಟೂರ್ನಿಗಳ ಕುರಿತು ಬಿಸಿಸಿಐ ಮಹತ್ವದ ಘೋಷಣೆ ಮಾಡಿದೆ. ರಣಜಿ ಟ್ರೋಫಿ ಸೇರಿದಂತೆ ಎಲ್ಲಾ ದೇಶೀಯ ಟೂರ್ನಿಗಳ ಬಹುಮಾನದ ಮೊತ್ತವನ್ನು ಹೆಚ್ಚಿಸಲು ಬಿಸಿಸಿಐ ನಿರ್ಧರಿಸಿದೆ. ರಣಜಿ ಟ್ರೋಫಿ ಚಾಂಪಿಯನ್‌ನ ಬಹುಮಾನದ ಮೊತ್ತವನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡುವ ಮೂಲಕ ದೇಶೀಯ ಟೂರ್ನಿಗಳ ಬಹುಮಾನದ ಮೊತ್ತ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದ್ದಾರೆ.
ರಣಜಿ ಟ್ರೋಫಿ ವಿಜೇತ ತಂಡಕ್ಕೆ ಈ ಮೊದಲು ಕೇವಲ 2 ಕೋಟಿ ರೂ. ಬಹುಮಾನ ನೀಡಲಾಗುತ್ತಿತ್ತು. ಆದರೆ ಈಗ 5 ಕೋಟಿ ರೂ. ಬಹುಮಾನ ಪಡೆಯಲ್ಲಿದ್ದಾರೆ. ಇದೇ ವೇಳೆ ರನ್ನರ್ ಅಪ್ಗೆ ಈ ಮೊತ್ತವನ್ನು 1 ಕೋಟಿಯಿಂದ 3 ಕೋಟಿಗೆ ಹೆಚ್ಚಿಸಲಾಗಿದೆ. ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ 1 ಕೋಟಿ ರೂ. ಬಹುಮಾನ ಸಿಗಲಿದೆ.
ಇರಾನಿ ಕಪ್ ವಿಜೇತರಿಗೆ 25 ಲಕ್ಷದ ಬದಲಿಗೆ 50 ಲಕ್ಷ ರೂ. ಬಹುಮಾನ ಸಿಗಲಿದೆ.
ದುಲೀಪ್ ಟ್ರೋಫಿ ಗೆದ್ದ ತಂಡಕ್ಕೆ 40 ಲಕ್ಷದ ಬದಲು 1 ಕೋಟಿ ರೂ. ಬಹುಮಾನ ಸಿಗಲಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲೂ ಈ ಹಿಂದೆ 30 ಲಕ್ಷ ಇದ್ದ ಬಹುಮಾನದ ಮೊತ್ತ ಈಗ 1 ಕೋಟಿ ರೂ. ಆಗಿದೆ.
ದೇವಧರ್ ಟ್ರೋಫಿಯಲ್ಲಿ ವಿಜೇತ ತಂಡದ ಬಹುಮಾನ ಮೊತ್ತ 25 ಲಕ್ಷದಿಂದ 40 ಲಕ್ಷಕ್ಕೆ ಏರಿಕೆಯಾಗಿದೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆಲ್ಲುವ ತಂಡಕ್ಕೆ 25 ಲಕ್ಷದ ಬದಲಿಗೆ 80 ಲಕ್ಷ ರೂ. ಬಹುಮಾನ ಸಿಗಲಿದೆ.
ಹಿರಿಯ ಮಹಿಳಾ ಪಂದ್ಯಾವಳಿಗಳ ವಿಜೇತ ತಂಡಗಳಿಗೆ ಈ ಬಾರಿ ಬಹುಮಾನದ ಮೊತ್ತದಲ್ಲಿ 8 ಪಟ್ಟು ಹೆಚ್ಚು ಹೆಚ್ಚಳವಾಗಿದೆ. ಏಕದಿನ ಟ್ರೋಫಿ ಗೆಲ್ಲುವ ತಂಡಕ್ಕೆ ಈಗ 6 ಲಕ್ಷದ ಬದಲಿಗೆ 50 ಲಕ್ಷ ರೂ. ಸಿಗಲಿದೆ. ಅದೇ ವೇಳೆ ಟಿ20 ಟ್ರೋಫಿ ಗೆದ್ದ ತಂಡಕ್ಕೆ 5 ಲಕ್ಷದ ಬದಲು 40 ಲಕ್ಷ ರೂ. ಬಹುಮಾನ ಸಿಗಲಿದೆ.
Published On - 4:04 pm, Mon, 17 April 23