
ಬಹುನಿರೀಕ್ಷಿತ ಏಷ್ಯಾಕಪ್ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡಕ್ಕೆ ಸೂರ್ಯಕುಮಾರ್ ಯಾದವ್ ನಾಯಕನಾಗಿ ಆಯ್ಕೆಯಾದರೆ, ಉಪನಾಯಕನಾಗಿ ಶುಭ್ಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು 15 ಸದಸ್ಯರುಗಳ ಜೊತೆಗೆ ಐವರು ಹೆಚ್ಚುವರಿ ಆಟಗಾರರನ್ನು ಸಹ ಆಯ್ಕೆ ಮಾಡಲಾಗಿದೆ.

ಅಂದರೆ ಮೀಸಲು ಆಟಗಾರರ ಪಟ್ಟಿಯಲ್ಲಿ ಐವರು ಪ್ಲೇಯರ್ಸ್ ಅನ್ನು ಏಷ್ಯಾಕಪ್ಗೆ ಹೆಸರಿಸಲಾಗಿದೆ. ಹೀಗೆ ಸ್ಥಾನ ಪಡೆದಿರುವ ಐವರು ಆಟಗಾರರು ಯುಎಇ ಗೆ ಪ್ರಯಾಣಿಸಲ್ಲ ಎಂದು ತಿಳಿದು ಬಂದಿದೆ. ಏಷ್ಯಾ ಕಪ್‌ಗಾಗಿ ಆಯ್ಕೆ ಮಾಡಲಾದ ಮೀಸಲು ಆಟಗಾರರನ್ನು ದುಬೈಗೆ ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ.

ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಪಿಟಿಐಗೆ ತಿಳಿಸಿದ್ದು, ಅಗತ್ಯವಿದ್ದಾಗ ಮಾತ್ರ ಮೀಸಲು ಆಟಗಾರರನ್ನು ದುಬೈಗೆ ಕಳುಹಿಸಲಾಗುತ್ತದೆ. ಹೀಗಾಗಿ ಹೆಚ್ಚುವರಿಯಾಗಿ ಆಯ್ಕೆಯಾಗಿರುವ ಆಟಗಾರರು 15 ಸದಸ್ಯರುಗಳ ತಂಡದ ಜೊತೆ ಪ್ರಯಾಣಿಸಲ್ಲ ಎಂದು ತಿಳಿದು ಬಂದಿದೆ. ಇನ್ನು ಸ್ಟ್ಯಾಂಡ್ ಬೈ ಪ್ಲೇಯರ್ಸ್ ಆಗಿ ಸ್ಥಾನ ಪಡೆದಿರುವ ಆಟಗಾರೆರೆಂದರೆ...

ಯಶಸ್ವಿ ಜೈಸ್ವಾಲ್: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಆರಂಭಿಕ ದಾಂಡಿಗನಾಗಿ ಆಯ್ಕೆಯಾಗಿದ್ದ ಯಶಸ್ವಿ ಜೈಸ್ವಾಲ್ ಈ ಬಾರಿ ಹೆಚ್ಚುವರಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ತಂಡದಲ್ಲಿ ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್ ಹಾಗೂ ಸಂಜು ಸ್ಯಾಮ್ಸನ್ ಆರಂಭಿಕರಾಗಿ ಸ್ಥಾನ ಪಡೆದಿದ್ದು, ಹೀಗಾಗಿ ಜೈಸ್ವಾಲ್ ಅವರನ್ನು ಮೀಸಲು ಪಟ್ಟಿಯಲ್ಲಿರಿಸಲಾಗಿದೆ.

ವಾಷಿಂಗ್ಟನ್ ಸುಂದರ್: ಏಷ್ಯಾಕಪ್ಗೆ ಸ್ಪಿನ್ ಆಲ್ರೌಂಡರ್ಗಳಾಗಿ ಅಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ. ಅಲ್ಲದೆ ಪರಿಪೂರ್ಣ ಸ್ಪಿನ್ನರ್ಗಳಾಗಿ ಕುಲ್ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ವಾಷಿಂಗ್ಟನ್ ಸುಂದರ್ ಈ ಬಾರಿ ಮೀಸಲು ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ರಿಯಾನ್ ಪರಾಗ್: ಯುವ ಆಲ್ರೌಂಡರ್ ರಿಯಾನ್ ಪರಾಗ್ ಅವರನ್ನು ಸಹ ಸ್ಟ್ಯಾಂಡ್ ಬೈ ಆಟಗಾರರ ಪಟ್ಟಿಯಲ್ಲಿರಿಸಲಾಗಿದೆ. ಭಾರತದ ಪರ ಈಗಾಗಲೇ 9 ಟಿ20 ಪಂದ್ಯಗಳನ್ನಾಡಿರುವ ಪರಾಗ್ ಏಷ್ಯಾಕಪ್ಗೆ ಹೆಚ್ಚುವರಿ ಆಲ್ರೌಂಡರ್ ಆಗಿ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಸಿದ್ಧ್ ಕೃಷ್ಣ: ಟೀಮ್ ಇಂಡಿಯಾ ಪರ 5 ಟಿ20 ಪಂದ್ಯಗಳನ್ನಾಡಿರುವ ಪ್ರಸಿದ್ಧ್ ಕೃಷ್ಣ ಈವರೆಗೆ 8 ವಿಕೆಟ್ ಕಬಳಿಸಿದ್ದಾರೆ. ಇದಾಗ್ಯೂ ಕರ್ನಾಟಕದ ವೇಗಿಗೆ 15 ಸದಸ್ಯರುಗಳ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಅತ್ತ ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಕಾಣಿಸಿಕೊಂಡಿದ್ದು. ಹೀಗಾಗಿ ಪ್ರಸಿದ್ಧ್ ಸ್ಟ್ಯಾಂಡ್ ಬೈ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಧ್ರುವ್ ಜುರೇಲ್: ಏಷ್ಯಾಕಪ್ಗೆ ವಿಕೆಟ್ ಕೀಪರ್ಗಳಾಗಿ ಸಂಜು ಸ್ಯಾಮ್ಸನ್ ಹಾಗೂ ಜಿತೇಶ್ ಶರ್ಮಾ ಆಯ್ಕೆಯಾಗಿದ್ದಾರೆ. ಹೀಗಾಗಿ ಧ್ರುವ್ ಜುರೇಲ್ ಅವರನ್ನು ಹೆಚ್ಚುವರಿ ಆಟಗಾರರ ಪಟ್ಟಿಯಲ್ಲಿರಿಸಲಾಗಿದೆ. ಅಂದರೆ ಸಂಜು ಅಥವಾ ಜಿತೇಶ್ ತಂಡದಿಂದ ಹೊರಬಿದ್ದರೆ ಧ್ರುವ್ ಜುರೇಲ್ 15 ಸದಸ್ಯರುಗಳ ತಂಡಕ್ಕೆ ಎಂಟ್ರಿ ಕೊಡಲಿದ್ದಾರೆ.

ಏಷ್ಯಾ ಕಪ್ಗೆ ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.