ಟೀಮ್ ಇಂಡಿಯಾ ಏಕದಿನ ನಾಯಕತ್ವ ಬದಲಾವಣೆಯ ಚರ್ಚೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೇವಲ ಭಾರತದ ಮಾಜಿ ಆಟಗಾರರು ಮಾತ್ರವಲ್ಲದೆ, ವಿದೇಶ ಆಟಗಾರರು ಕೂಡ ಈ ಕುರಿತು ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಸದ್ಯ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಇದೇ ವಿಚಾರವಾಗಿ ಮಾತನಾಡಿದ್ದು, ಕೊಹ್ಲಿ-ರೋಹಿತ್ ನಡುವಣ ನಾಯಕತ್ವದ ಹಂಚಿಕೆ ಬಗ್ಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ.
ನಾಯಕತ್ವ ಹಂಚಿಕೆ ಮಾಡಿರುವುದು ಉತ್ತಮ ನಿರ್ಧಾರ. ಸೀಮಿತ ಓವರ್ಗಳ ಮತ್ತು ಟೆಸ್ಟ್ ಕ್ರಿಕೆಟ್ಗೆ ಪ್ರತ್ಯೇಕ ನಾಯಕನ ಆಯ್ಕೆ ಉತ್ತಮ ನಿರ್ಧಾರ. ಇದರಿಂದ ಬಿಡುವಿಲ್ಲದ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಟಗಾರರ ಮೇಲಿನ ಹೊರೆ ನಿರ್ವಹಣೆ ಸಾಧ್ಯ. ಆದರೆ, ಇದರಿಂದ ಟೀಮ್ ಇಂಡಿಯಾ ಡ್ರೆಸಿಂಗ್ ರೂಮ್ ಇಬ್ಭಾಗವಾಗಬಾರದು ಅಷ್ಟೇ ಎಂದು ಹಾಗ್ ಹೇಳಿದ್ದಾರೆ.
ಈ ಬೆಳವಣಿಗೆಯನ್ನು ವಿರಾಟ್ ಕೊಹ್ಲಿ ಆನಂದಿಸಬೇಕು. ಈ ಮೂಲಕ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದ ಕಡೆಗೆ ಗಮನ ನೀಡಿ ಆಟ ಸುಧಾರಿಸುವ ಕಡೆಗೆ ಗಮನ ಕೊಡಬೇಕಾಗಿದೆ. ಅದೇ ರೀತಿ ರೋಹಿತ್ ಶರ್ಮಾ ವೈಟ್ ಬಾಲ್ ಕ್ರಿಕೆಟ್ ನಾಯಕತ್ವದ ಕಡೆಗೆ ಗಮನ ನೀಡಬೇಕು. ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರದಿಂದ ವಿರಾಟ್ ಕೊಹ್ಲಿ ಮೇಲಿನ ಒತ್ತಡ ನಿಜಕ್ಕೂ ಕಡಿಮೆಯಾಗಲಿದೆ – ಬ್ರಾಡ್ ಹಾಗ್.
ಆದರೆ, ಈ ನಿರ್ಧಾರದಿಂದ ವಿರಾಟ್ ಕೊಹ್ಲಿ ಯಾಕೋ ಖುಷಿ ಆದಂತೆ ಕಾಣುತ್ತಿಲ್ಲ. ಮುಂಬೈನಲ್ಲಿ ಆಯೋಜಿಸಿದ್ದ ಪ್ಯಾಕ್ಟೀಸ್ ಸೆಷನ್ಗೆ ವಿರಾಟ್ ಹಾಜರಾಗಿಲ್ಲವಂತೆ. ಕ್ವಾರಂಟೈನ್ಗೂ ಮುನ್ನ ಭಾರತದ ಬಹುತೇಕ ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಆದರೆ, ಯಾವುದೇ ಪ್ರ್ಯಾಕ್ಟೀಸ್ಗೆ ವಿರಾಟ್ ಕೊಹ್ಲಿ ಹಾಜರಿರಲ್ಲವಂತೆ.
ಇನ್ನು ಟೀಮ್ ಇಂಡಿಯಾ ಮಾಜಿ ಬ್ಯಾಟರ್ ಗೌತಮ್ ಗಭೀರ್ ಕೂಡ ರೋಹಿತ್ಗೆ ನಾಯಕತ್ವದ ಜವಾಬ್ದಾರಿ ನೀಡಿದ್ದು ಒಳ್ಳೆಯ ನಿರ್ಧಾರ ಎಂದು ಮಾತನಾಡಿದ್ದಾರೆ.
ಟೀಮ್ ಇಂಡಿಯಾದ ಏಕದಿನ ಹಾಗೂ ಟಿ20 ನಾಯಕತ್ವದಿಂದ ಕೆಳಕ್ಕಿಳಿದ ಬಳಿಕ ವಿರಾಟ್ ಕೊಹ್ಲಿ ಎದುರಾಳಿಗರಿಗೆ ಮತ್ತಷ್ಟು ಅಪಾಯಕಾರಿ ಬ್ಯಾಟರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಟೀಮ್ ಇಂಡಿಯಾ ಡಿಸೆಂಬರ್ 16 ರಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು 3 ದಿನಗಳ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಮುಂಬೈಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಫೈವ್ಸ್ಟಾರ್ ಹೊಟೇಲ್ ಒಂದರಲ್ಲಿ ಇವರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಚಾರ್ಟರ್ ವಿಮಾನವೊಂದರಲ್ಲಿ ಭಾರತ ತಂಡ ಜೊಹಾನ್ಸ್ಬರ್ಗ್ಗೆ ತೆರಳಲಿದೆ.