
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಅನಾನುಭವಿ ಪಡೆಯೊಂದಿಗೆ ಕಣಕ್ಕಿಳಿದಿರುವ ಆಸ್ಟ್ರೇಲಿಯಾ ಅಂತು ಇಂತು ಸೆಮಿಫೈನಲ್ಗೆ ಪ್ರವೇಶಿಸಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಆಸೀಸ್ ಪಡೆಗೆ ಆ ಬಳಿಕ ವರುಣ ಅವಕೃಪೆ ತೋರಿದ್ದ. ಪರಿಣಾಮ ಸೌತ್ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ್ ನಡುವಣ ಪಂದ್ಯವು ರದ್ದಾಗಿದ್ದವು.

ಈ ರದ್ದತಿಯೊಂದಿಗೆ ತಲಾ ಒಂದೊಂದು ಅಂಕಗಳನ್ನು ಪಡೆದಿದ್ದ ಆಸ್ಟ್ರೇಲಿಯಾ ಇದೀಗ ಒಟ್ಟು 4 ಅಂಕಗಳೊಂದಿಗೆ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ. ನಾಕೌಟ್ ಹಂತಕ್ಕೇರಿದ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ಪ್ರಮುಖ ಆಟಗಾರ ಮ್ಯಾಥ್ಯೂ ಶಾರ್ಟ್ ಗಾಯಗೊಂಡಿದ್ದಾರೆ.

ಲಾಹೋರ್ನಲ್ಲಿ ಶುಕ್ರವಾರ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಮ್ಯಾಥ್ಯೂ ಶಾರ್ಟ್ ಗಾಯಗೊಂಡಿದ್ದು, ಹೀಗಾಗಿ ಅವರು ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎಂದು ವರದಿಯಾಗಿದೆ. ಇತ್ತ ನಿರ್ಣಾಯಕ ಪಂದ್ಯಕ್ಕೆ ಶಾರ್ಟ್ ಅಲಭ್ಯರಾದರೆ ಆಸ್ಟ್ರೇಲಿಯಾ ಪಾಲಿಗೆ ಹಿನ್ನಡೆ ಉಂಟಾಗಲಿದೆ.

ಏಕೆಂದರೆ ಆಸ್ಟ್ರೇಲಿಯಾ ತಂಡದಿಂದ ಈಗಾಗಲೇ ಪ್ಯಾಟ್ ಕಮಿನ್ಸ್, ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್ವುಡ್ ಹಾಗೂ ಮಾರ್ಕಸ್ ಸ್ಟೋಯಿನಿಸ್ ಹೊರಗುಳಿದಿದ್ದಾರೆ. ಇದೀಗ ಸೆಮಿ ಫೈನಲ್ಗೆ ಮ್ಯಾಥ್ಯೂ ಶಾರ್ಟ್ ಅಲಭ್ಯರಾದರೆ ಅವರ ಬದಲಿಗೆ ಅನಾನುಭವಿ ಜೇಕ್ ಪ್ರೇಸರ್ ಮೆಕ್‌ಗುರ್ಕ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಬೇಕಾಗುತ್ತದೆ. ಇದುವೇ ಈಗ ಆಸ್ಟ್ರೇಲಿಯಾ ತಂಡದ ಚಿಂತೆಗೆ ಕಾರಣವಾಗಿದೆ.

ಆಸ್ಟ್ರೇಲಿಯಾ ತಂಡ: ಸ್ಟೀವ್ ಸ್ಮಿತ್ (ನಾಯಕ), ಜೇಕ್ ಫ್ರೇಸರ್ ಮೆಕ್‌ಗುರ್ಕ್, ಆರೋನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಆ್ಯಡಂ ಝಂಪಾ, ಶಾನ್ ಅಬಾಟ್, ಅಲೆಕ್ಸ್ ಕ್ಯಾರಿ , ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಮ್ಯಾಥ್ಯೂ ಶಾರ್ಟ್ (ಗಾಯಾಳು).