
ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ ಎಂದು ವರದಿಯಾಗಿದೆ. ಈ ದಿನಾಂಕ ನಿಗದಿಯ ಬೆನ್ನಲ್ಲೇ ಟೀಮ್ ಇಂಡಿಯಾದ ಪಂದ್ಯಗಳ ಕರಡು ವೇಳಾಪಟ್ಟಿ ಕೂಡ ಹೊರಬಿದ್ದಿದೆ. ಈ ವೇಳಾಪಟ್ಟಿಯಂತೆ ಭಾರತ ತಂಡವು ಫೆಬ್ರವರಿ 20 ರಿಂದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ.

ಗ್ರೂಪ್-ಎ ನಲ್ಲಿ ಕಾಣಿಸಿಕೊಂಡಿರುವ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಎರಡನೇ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಹಾಗೆಯೇ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡದ ವಿರುದ್ಧ ಸೆಣಸಲಿದೆ. ಅದರಂತೆ ಟೀಮ್ ಇಂಡಿಯಾದ ಕರಡು ವೇಳಾಪಟ್ಟಿ ಈ ಕೆಳಗಿನಂತಿದೆ...…

ಫೆಬ್ರವರಿ 20 ರಂದು ಭಾರತ Vs ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಲಿದೆ. ಫೆಬ್ರವರಿ 23 ರಂದು ಭಾರತ Vs ಪಾಕಿಸ್ತಾನ್ ನಡುವಣ ಹೈವೋಲ್ಟೆಜ್ ಪಂದ್ಯ ನಡೆಯಲಿದೆ. ಭಾರತ Vs ನ್ಯೂಝಿಲೆಂಡ್ ತಂಡಗಳು ಮಾರ್ಚ್ 2 ರಂದು ಸೆಣಸಲಿದೆ.

ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳು ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆಯಲಿದೆ. ಏಕೆಂದರೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಅದರಂತೆ ಭಾರತದ ಪಂದ್ಯಗಳು ದುಬೈ ಅಥವಾ ಕೊಲಂಬೊದಲ್ಲಿ ಜರುಗಲಿದೆ. ಹಾಗೆಯೇ ಉಳಿದ ಮ್ಯಾಚ್ಗಳು ಪಾಕಿಸ್ತಾನದಲ್ಲೇ ನಡೆಯಲಿದೆ.

ಇನ್ನು ಟೀಮ್ ಇಂಡಿಯಾ ಸೆಮಿಫೈನಲ್ಗೆ ಪ್ರವೇಶಿಸಿದರೆ ಆ ಪಂದ್ಯ ಕೂಡ ತಟಸ್ಥ ಸ್ಥಳದಲ್ಲಿ ಜರುಗಲಿದೆ. ಹಾಗೆಯೇ ಭಾರತ ತಂಡವು ಫೈನಲ್ಗೆ ಪ್ರವೇಶಿಸಿದರೆ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯ ಪಾಕ್ನಲ್ಲಿ ನಡೆಯುವುದಿಲ್ಲ. ಬದಲಾಗಿ ದುಬೈ ಅಥವಾ ಕೊಲಂಬೊದಲ್ಲಿ ಫೈನಲ್ ಪಂದ್ಯ ಆಯೋಜನೆಯಾಗಲಿದೆ.
Published On - 12:56 pm, Sun, 22 December 24