
ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ನಾಕೌಟ್ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 4 ತಂಡಗಳು ಹೊರಬಿದ್ದರೆ, 4 ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಿದೆ. ಹೀಗೆ ಮುಂದಿನ ಹಂತಕ್ಕೇರಿದ ತಂಡಗಳೆಂದರೆ ಭಾರತ, ನ್ಯೂಝಿಲೆಂಡ್, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ.

ಇಂಟ್ರೆಸ್ಟಿಂಗ್ ವಿಷಯ ಎಂದರೆ, 2015 ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇದೇ ನಾಲ್ಕು ತಂಡಗಳು ಸೆಮಿಫೈನಲ್ ಆಡಿತ್ತು. ಇನ್ನು 2023ರ ಏಕದಿನ ವಿಶ್ವಕಪ್ನಲ್ಲೂ ಭಾರತ, ಸೌತ್ ಆಫ್ರಿಕಾ, ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ನಲ್ಲಿ ಕಾಣಿಸಿಕೊಂಡಿತ್ತು.

ಇಲ್ಲಿ ಭಾರತ ತಂಡ ನ್ಯೂಝಿಲೆಂಡ್ ತಂಡವನ್ನು ಮಣಿಸಿ ಫೈನಲ್ಗೆ ಪ್ರವೇಶಿಸಿದರೆ, ಆಸ್ಟ್ರೇಲಿಯಾ ತಂಡ ಸೌತ್ ಆಫ್ರಿಕಾ ತಂಡಕ್ಕೆ ಸೋಲುಣಿಸಿ ಏಕದಿನ ವಿಶ್ವಕಪ್ನ ಫೈನಲ್ ಫೈಟ್ಗೆ ಎಂಟ್ರಿ ಕೊಟ್ಟಿತ್ತು. ಅಲ್ಲದೆ ಅಂತಿಮ ಪಂದ್ಯದಲ್ಲಿ ಭಾರತ ತಂಡಕ್ಕೆ ಸೋಲುಣಿಸಿ ಆಸ್ಟ್ರೇಲಿಯಾ 2023ರ ಏಕದಿನ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದದ್ದು ಈಗ ಇತಿಹಾಸ.

ಇದೀಗ ಇದೇ ನಾಲ್ಕು ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲೂ ಸೆಮಿಫೈನಲ್ಗೆ ಪ್ರವೇಶಿಸಿದೆ. ಈ ಮೂಲಕ ಮತ್ತೊಮ್ಮೆ ಇತಿಹಾಸವನ್ನು ಪುನರಾವರ್ತಿಸಿದ್ದಾರೆ. ಆದರೆ 2023 ರಲ್ಲಿ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಿದ್ದ ತಂಡಗಳು ಈ ಬಾರಿ ಪರಸ್ಪರ ಸೆಣಸುವುದಿಲ್ಲ ಎಂಬುದು ಖಚಿತವಾಗಿದೆ.

ಏಕೆಂದರೆ ಕಳೆದ ಬಾರಿಯ ಸೆಮಿಫೈನಲಿಸ್ಟ್ ಭಾರತ ಮತ್ತು ನ್ಯೂಝಿಲೆಂಡ್ ಗ್ರೂಪ್-ಎ ನಲ್ಲಿದ್ದರೆ, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ಗ್ರೂಪ್-ಬಿ ನಲ್ಲಿದೆ. ಹೀಗಾಗಿ ಈ ನಾಲ್ಕು ತಂಡಗಳು ಪರಸ್ಪರ ವಿರುದ್ಧವಾಗಿ ಸೆಣಸಲಿದೆ. ಅಂದರೆ ಇಲ್ಲಿ ಟೀಮ್ ಇಂಡಿಯಾಗೆ ಸೆಮಿಫೈನಲ್ ಎದುರಾಳಿಯಾಗಿ ಆಸ್ಟ್ರೇಲಿಯಾ ಅಥವಾ ಸೌತ್ ಆಫ್ರಿಕಾ ಸಿಗಲಿದೆ. ಅದರಂತೆ ಈ ಬಾರಿ ಫೈನಲ್ಗೆ ಎಂಟ್ರಿ ಕೊಡುವ 2 ತಂಡಗಳಾವುವು ಎಂಬುದೇ ಈಗ ಕುತೂಹಲ.