
ನಾಯಕತ್ವದ ಬದಲಾವಣೆ ಮತ್ತು ಎಂಎಸ್ ಧೋನಿಯ ಕೊನೆಯ ಸೀಸನ್ ಎನ್ನಲಾಗುತ್ತಿರುವ ಕಾರಣ ಈ ಬಾರಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೇಲೆ ಎಲ್ಲರ ಕಣ್ಣಿದೆ. ಆದರೆ, ಸಿಎಸ್‌ಕೆ ಆಡಿರುವ 11 ಪಂದ್ಯಗಳಲ್ಲಿ ಆರು ಗೆಲುವು ಮತ್ತು ಐದು ಪಂದ್ಯಗಳಲ್ಲಿ ಸೋಲು ಕಂಡು 12 ಅಂಕ ಪಡೆದುಕೊಂಡಿದೆ.

ರುತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್‌ಕೆ ತನ್ನ ಮುಂದಿನ ಪಂದ್ಯವನ್ನು ಗುರುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಆದರೆ, ಇದಕ್ಕೂ ಮುನ್ನ ಚೆನ್ನೈಗೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಶ್ರೀಲಂಕಾದ ವೇಗಿ ಮಥೀಶ ಪತಿರಾನಾ ಅವರು ಐಪಿಎಲ್ 2024ರ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಐಪಿಎಲ್ 2024 ರ ಆರು ಪಂದ್ಯಗಳಲ್ಲಿ ಮಥೀಶ ಪತಿರಾನಾ 13 ವಿಕೆಟ್‌ಗಳನ್ನು ಪಡೆದಿದ್ದರು. 21 ವರ್ಷದ ಕ್ರಿಕೆಟಿಗ ಸಿಎಸ್ಕೆಗಾಗಿ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದೇನೆ ಎಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ರುತುರಾಜ್ ಪಡೆಗೆ ದೊಡ್ಡ ಹೊಡೆತ ಬೀಳುವುದು ಖಚಿತ.

ಪತಿರಾನಾ ಚೆನ್ನೈ ಮತ್ತು ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಸಿಎಸ್‌ಕೆಯ ಎರಡು ಪಂದ್ಯಗಳಿಗೆ ಗೈರಾಗಿದ್ದರು. ಆದರೆ, ಮುಂಬರುವ ಪಂದ್ಯಗಳಲ್ಲಿ ಅವರು ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಇದೀಗ ಇನ್ಸ್ಟಾಗ್ರಾಮ್ನಲ್ಲಿ ಸಿಎಸ್‌ಕೆ ಜೊತೆಗಿನ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಪತಿರಾನಾ ಸಿಎಸ್‌ಕೆ ತಂಡವನ್ನು ತೊರೆದ ಬಗ್ಗೆ ಖಚಿತಪಡಿಸಿದ್ದಾರೆ.

“ಸಿಎಸ್‌ಕೆ ಡ್ರೆಸ್ಸಿಂಗ್ ರೂಮ್ನಲ್ಲಿ 2024 ರ ಐಪಿಎಲ್ ಚಾಂಪಿಯನ್ ಟ್ರೋಫಿಯನ್ನು ಶೀಘ್ರದಲ್ಲೇ ನೋಡುವ ನನ್ನ ಏಕೈಕ ಆಸೆಯೊಂದಿಗೆ ಕಠಿಣ ವಿದಾಯ ಹೇಳುತ್ತಿದ್ದೇನೆ.! ಚೆನ್ನೈನ ಪ್ರೀತಿಗಾಗಿ ಮತ್ತು ಸಿಎಸ್‌ಕೆ ತಂಡಕ್ಕೆ ಕೃತಜ್ಞತೆಗಳು,'' ಎಂದು ಮಥೀಶ ಪತಿರಾನಾ ಬರೆದುಕೊಂಡಿದ್ದಾರೆ.

2022 ರಲ್ಲಿ ಸಿಎಸ್‌ಕೆ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಪತಿರಾನಾ, ಈ ವರ್ಷ ಉತ್ತಮ ಪ್ರದರ್ಶನ ತೋರಿದ್ದರು. ತಂಡದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಇದೀಗ ಮಂಡಿರಜ್ಜು ಗಾಯದಿಂದ ಸಂಪೂರ್ಣ ಟೂರ್ನಿಂದ ಹೊರಬಿದ್ದಿದ್ದಾರೆ. ಇವರ ಅನುಪಸ್ಥಿತಿ ತಂಡಕ್ಕೆ ಕಾಡಲಿದೆ.

ಪ್ಲೇಆಫ್‌ಗೆ ಅರ್ಹತೆ ಪಡೆಯುವ ರೇಸ್‌ನಲ್ಲಿ ಜೀವಂತವಾಗಿರುವ ಹಾಲಿ ಚಾಂಪಿಯನ್ ಸಿಎಸ್‌ಕೆ, ಈಗ ಉಳಿದ ಪಂದ್ಯಗಳಿಗೆ ಪತಿರಾನ ಬದಲಿಗೆ ಮತ್ತೊಬ್ಬ ಆಟಗಾರನನ್ನು ಸಹಿ ಹಾಕಲು ನೋಡುತ್ತಿದೆ. ಏಪ್ರಿಲ್ 14 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಸಿಎಸ್‌ಕೆ ಪಂದ್ಯದ ವೇಳೆ, ನಾಲ್ಕು ಓವರ್‌ಗಳಲ್ಲಿ 28 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಪತಿರಾನ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.