- Kannada News Photo gallery Cricket photos IPL 2024 sunrisers hyderabad defeat against mumbai indians benefit for 6 teams
IPL 2024: ಮುಂಬೈ ವಿರುದ್ಧ ಹೈದರಾಬಾದ್ ಸೋತರೆ ಆರ್‌ಸಿಬಿ ಸೇರಿದಂತೆ ಈ 6 ತಂಡಗಳಿಗೆ ಲಾಭ..!
IPL 2024: ಇದುವರೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ 10 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 6 ಪಂದ್ಯಗಳನ್ನು ಗೆದ್ದು 12 ಅಂಕಗಳನ್ನು ಸಂಪಾಧಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆದ್ದರೆ ತಂಡ 14 ಅಂಕ ಪಡೆಯಲಿದೆ. ಇದು ಸಂಭವಿಸಿದರೆ ಇತರ ತಂಡಗಳು ಪ್ಲೇ ಆಫ್ ತಲುಪಲು ಕಷ್ಟವಾಗುತ್ತದೆ.
Updated on:May 06, 2024 | 5:35 PM

ಐಪಿಎಲ್ 55ನೇ ಪಂದ್ಯದಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಪ್ಲೇಆಫ್‌ನಿಂದ ಭಾಗಶಃ ಹೊರಬಿದ್ದಿದೆ. ಅದಾಗ್ಯೂ ಹೈದರಾಬಾದ್ ವಿರುದ್ಧ ಇಂದು ನಡೆಯುವ ಪಂದ್ಯವನ್ನು ಮುಂಬೈ ಗೆಲ್ಲುವುದು ಇತರ 6 ತಂಡಗಳಿಗೆ ಬಹಳ ಮುಖ್ಯ.

ಪ್ರಸ್ತುತ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಇದುವರೆಗೆ 11 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಮೂರು ಪಂದ್ಯಗಳನ್ನು ಮಾತ್ರ ಗೆದ್ದಿದೆ. ಉಳಿದಂತೆ 8 ಪಂದ್ಯಗಳಲ್ಲಿ ತಂಡ ಸೋಲನುಭವಿಸಿದೆ. ಇಂದಿನ ಪಂದ್ಯದಲ್ಲಿ ಮುಂಬೈ ಸೋತರೆ ಪ್ಲೇ ಆಫ್ ರೇಸ್ನಿಂದ ಅಧಿಕೃತವಾಗಿ ಹೊರಗುಳಿಯಲಿದೆ. ಆದರೆ ಮೇಲೆ ಹೇಳಿದತೆ ಮುಂಬೈ ತಂಡದ ಗೆಲುವು ಪಾಯಿಂಟ್ ಪಟ್ಟಿಯಲ್ಲಿ 6 ತಂಡಗಳಿಗೆ ಲಾಭವಾಗಲಿದೆ.

ಇದುವರೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ 10 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 6 ಪಂದ್ಯಗಳನ್ನು ಗೆದ್ದು 12 ಅಂಕಗಳನ್ನು ಸಂಪಾಧಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆದ್ದರೆ ತಂಡ 14 ಅಂಕ ಪಡೆಯಲಿದೆ. ಇದು ಸಂಭವಿಸಿದರೆ ಇತರ ತಂಡಗಳು ಪ್ಲೇ ಆಫ್ ತಲುಪಲು ಕಷ್ಟವಾಗುತ್ತದೆ.

ಆದರೆ ಇಂದಿನ ಪಂದ್ಯದಲ್ಲಿ ಹೈದರಾಬಾದ್ ಸೋತರೆ, ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್, ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಭಾರಿ ಲಾಭವಾಗಲಿದೆ. ಅಲ್ಲದೆ ಈ ತಂಡಗಳಿಗೆ ಪ್ಲೇಆಫ್ ಹಾದಿಯೂ ಸನಿಹವಾಗಲಿದೆ.

ಹೈದರಾಬಾದ್ ಸೋಲಿನಿಂದ ಲಾಭ ಪಡೆಯುವ ಮುಖ್ಯ ತಂಡಗಳಲ್ಲಿ ಸಿಎಸ್ಕೆ ಅಗ್ರಸ್ಥಾನದಲ್ಲಿದೆ. ಚೆನ್ನೈ ಇದುವರೆಗೆ 11 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 6 ಪಂದ್ಯಗಳನ್ನು ಗೆದ್ದು 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇಂದು ಹೈದರಾಬಾದ್ ಸೋತರೆ ಸಿಎಸ್ಕೆ ತಂಡ ಮೂರನೇ ಸ್ಥಾನದಲ್ಲಿ ಉಳಿಯಲಿದೆ. ಒಂದು ವೇಳೆ ಹೈದರಾಬಾದ್ ಗೆದ್ದರೆ ಒಂದು ಸ್ಥಾನ ಕೆಳಗಿಳಿಯಲಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ 11 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 6 ಪಂದ್ಯಗಳನ್ನು ಗೆದ್ದು, 12 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಆದರೆ ತಂಡದ ನೆಟ್ ರನ್ ರೇಟ್ ಮೈನಸ್ 0.372 ಆಗಿದೆ. ಹೀಗಾಗಿ 5ನೇ ಸ್ಥಾನದಲ್ಲಿದೆ. ಇಂದು ಹೈದರಾಬಾದ್ ಸೋತರೆ, ಉಭಯ ತಂಡಗಳು ತಲಾ 11 ಪಂದ್ಯಗಳಿಂದ 12 ಅಂಕ ಗಳಿಸಿದಂತ್ತಾಗುತ್ತದೆ. ಲಕ್ನೋ ತಂಡ ತನ್ನ ಮುಂದಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಆಡಬೇಕಿದ್ದು, ಈ ಪಂದ್ಯದಲ್ಲೂ ಹೈದರಾಬಾದ್ ಸೋತರೆ ಲಕ್ನೋ ಮೇಲೇರಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ 11 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು 10 ಅಂಕ ಗಳಿಸಿದೆ. ಡೆಲ್ಲಿಗೆ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿವೆ. ಇಲ್ಲಿಂದ ಡೆಲ್ಲಿ ಪ್ಲೇಆಫ್‌ಗೆ ಹೋಗಬೇಕೆಂದರೆ ಪಾಯಿಂಟ್ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿರುವ ತಂಡಗಳು ತಮ್ಮ ಪಂದ್ಯಗಳಲ್ಲಿ ಸೋಲಬೇಕು. ಅದರಂತೆ ಇಂದು ಹೈದರಾಬಾದ್ ಸೋತರೆ ಡೆಲ್ಲಿಗೆ ಪ್ಲೇಆಫ್‌ನ ಹಾದಿ ತೆರೆಯಬಹುದು.

ಈ ಮೂರು ತಂಡಗಳಲ್ಲದೆ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ ತಲಾ 4 ಪಂದ್ಯಗಳನ್ನು ಗೆದ್ದಿವೆ. ಈ ಎಲ್ಲಾ ತಂಡಗಳು ತಲಾ 8 ಅಂಕಗಳನ್ನು ಹೊಂದಿವೆ. ಉಳಿದಿರುವ ಎಲ್ಲಾ ಪಂದ್ಯಗಳನ್ನು ಈ ತಂಡಗಳು ಗೆದ್ದರೆ ಗರಿಷ್ಠ 14 ಅಂಕಗಳನ್ನು ಸಂಪಾದಿಸಲಿವೆ. ಇಲ್ಲಿ ಪ್ರಮುಖವಾಗಿ ಹೈದರಾಬಾದ್ ತನ್ನ ಉಳಿದ ಎಲ್ಲಾ ಪಂದ್ಯಗಳನ್ನು ಸೋಲಬೇಕು. ಇದು ಸಾಧ್ಯವಾದರೆ ಹೈದರಾಬಾದ್ ಬಳಿ 12 ಅಂಕಗಳು ಮಾತ್ರ ಇರುತವೆ. ಇದು ಹೈದರಾಬಾದ್ ತಂಡವನ್ನು ಪ್ಲೇಆಫ್‌ನಿಂದ ಹೊರಗಿಡಲಿದೆ.
Published On - 5:26 pm, Mon, 6 May 24




