Updated on: Feb 19, 2023 | 10:09 PM
ದೆಹಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ ಚೇತೇಶ್ವರ ಪೂಜಾರ ಟೆಸ್ಟ್ ಕೆರಿಯರ್ನಲ್ಲಿ 100 ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಬರೆದಿದ್ದರು. ಅಲ್ಲದೆ ಈ ಸಾಧನೆ ಮಾಡಿದ ಟೀಮ್ ಇಂಡಿಯಾದ 13ನೇ ಆಟಗಾರ ಎನಿಸಿಕೊಂಡಿದ್ದರು.
ಇದಲ್ಲದೆ ಈ ಪಂದ್ಯದ ಮೂಲಕ ಚೇತೇಶ್ವರ ಪೂಜಾರ ಮೂರು ದಾಖಲೆಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಇದರಲ್ಲಿ 2 ವಿಶೇಷ ದಾಖಲೆಯಾದರೆ, ಒಂದು ಬೇಡದ ದಾಖಲೆಯಾಗಿದೆ.
ಚೇತೇಶ್ವರ ಪೂಜಾರ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇದರೊಂದಿಗೆ 100ನೇ ಟೆಸ್ಟ್ ಪಂದ್ಯದಲ್ಲಿ ಸೊನ್ನೆಗೆ ಔಟಾದ 2ನೇ ಭಾರತೀಯ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ದಿಲೀಪ್ ವೆಂಗ್ಸರ್ಕಾರ್ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು.
ಇನ್ನು 2ನೇ ಇನಿಂಗ್ಸ್ನಲ್ಲಿ ಫೋರ್ ಬಾರಿಸುವ ಮೂಲಕ ಚೇತೇಶ್ವರ ಪೂಜಾರ ಟೀಮ್ ಇಂಡಿಯಾ ಪರ ಗೆಲುವಿನ ರನ್ ಬಾರಿಸಿದ್ದರು. ಇದರೊಂದಿಗೆ ಶತಕದ ಪಂದ್ಯದಲ್ಲಿ ಗೆಲುವಿನ ರನ್ಗಳಿಸಿದ ವಿಶ್ವ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪೂಜಾರ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2006 ರಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ರನ್ ಬಾರಿಸಿ ದಾಖಲೆ ಬರೆದಿದ್ದರು.
ಹಾಗೆಯೇ ಟೆಸ್ಟ್ ಕ್ರಿಕೆಟ್ನಲ್ಲಿ ಬೌಲರೊಬ್ಬರ ವಿರುದ್ಧ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಕೂಡ ಪೂಜಾರ ಪಾಲಾಗಿದೆ. ಈ ಹಿಂದೆ ಈ ದಾಖಲೆ ಶ್ರೀಲಂಕಾದ ಕುಮಾರ ಸಂಗಾಕ್ಕರ ಹೆಸರಿನಲ್ಲಿತ್ತು. ಲಂಕಾ ಬ್ಯಾಟ್ಸ್ಮನ್ ಪಾಕಿಸ್ತಾನ್ ಸ್ಪಿನ್ನರ್ ಸಯೀದ್ ಅಜ್ಮಲ್ ವಿರುದ್ಧ ಒಟ್ಟು 531 ರನ್ ಕಲೆಹಾಕಿದ್ದರು.
ಇದೀಗ ಚೇತೇಶ್ವರ ಪೂಜಾರ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ವಿರುದ್ಧ ಒಟ್ಟು 532 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಬೌಲರ್ರೊಬ್ಬರ ವಿರುದ್ಧ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಪೂಜಾರ ತಮ್ಮದಾಗಿಸಿಕೊಂಡರು.