
Ashes 2025: ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯಾಗೆ ಸುಮಾರು 17 ಕೋಟಿ ರೂ. ನಷ್ಟವಾಗಿದೆ ಎಂದರೆ ನಂಬುತ್ತೀರಾ?... ನಂಬಲೇಬೇಕು.

ಏಕೆಂದರೆ ಐದು ದಿನಗಳ ಜಿದ್ದಾಜಿದ್ದಿನ ಕದನವನ್ನು ನಿರೀಕ್ಷಿಸಲಾಗಿದ್ದ ಪರ್ತ್ ಟೆಸ್ಟ್ ಪಂದ್ಯವು ಕೇವಲ 2 ದಿನಗಳಲ್ಲೇ ಮುಗಿದು ಹೋಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 172 ರನ್ ಕಲೆಹಾಕಿದರೆ, ಆಸ್ಟ್ರೇಲಿಯಾ ತಂಡ 132 ರನ್ಗಳಿಸಿ ಆಲೌಟ್ ಆಯಿತು.

ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವು 164 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಅದರಂತೆ ಕೊನೆಯ ಇನಿಂಗ್ಸ್ನಲ್ಲಿ 205 ರನ್ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 83 ಎಸೆತಗಳಲ್ಲಿ 123 ರನ್ ಸಿಡಿಸಿದ್ದರು. ಈ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಆಸ್ಟ್ರೇಲಿಯಾ ತಂಡ 28.2 ಓವರ್ಗಳಲ್ಲಿ 205 ರನ್ಗಳಿಸಿ 2ನೇ ದಿನದಾಟದಲ್ಲೇ ಪಂದ್ಯ ಮುಗಿಸಿದ್ದರು.

ಇತ್ತ ಆಸ್ಟ್ರೇಲಿಯಾ ತಂಡವು ಕೇವಲ 2 ದಿನದಾಟದಲ್ಲೇ ಪಂದ್ಯ ಮುಗಿಸಿದ್ದರಿಂದ ಕ್ರಿಕೆಟ್ ಆಸ್ಟ್ರೇಲಿಯಾ 3 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ನಷ್ಟ ಅನುಭವಿಸಿದೆ. ಎಬಿಸಿ ಸ್ಪೋರ್ಟ್ಸ್ ವರದಿಯ ಪ್ರಕಾರ, ಮೊದಲ ಟೆಸ್ಟ್ ಪಂದ್ಯವು 2 ದಿನಗಳಲ್ಲೇ ಮುಗಿದ ಕಾರಣ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಆದಾಯಕ್ಕೆ ಹೊಡೆತ ಬಿದ್ದಿದೆ.

ಏಕೆಂದರೆ ಭಾನುವಾರ ಪಂದ್ಯ ವೀಕ್ಷಿಸಲು 60 ಸಾವಿರ ಮಂದಿ ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಆದರೆ ಟ್ರಾವಿಸ್ ಹೆಡ್ ಅವರ ಆರ್ಭಟದಿಂದಾಗಿ ಮೊದಲ ಟೆಸ್ಟ್ ಪಂದ್ಯವು ಎರಡನೇ ದಿನದಾಟದಲ್ಲೇ ಮುಗಿಯಿತು. ಇದರಿಂದಾಗಿ ಉಳಿದ ದಿನಗಳ ಟಿಕೆಟ್ ಮಾರಾಟ ಕೂಡ ವ್ಯರ್ಥವಾಗಿದೆ. ಈ ಟಿಕೆಟ್ ಮಾರಾಟಗಳಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಸುಮಾರು 3 ಮಿಲಿಯನ್ ಡಾಲರ್ ಆದಾಯಗಳಿಸುವ ಇರಾದೆಯಲ್ಲಿತ್ತು. ಆದರೆ ಆಸ್ಟ್ರೇಲಿಯಾ ತಂಡವು 2ನೇ ದಿನಕ್ಕೆ ಪಂದ್ಯ ಮುಗಿಸಿದ್ದರಿಂದ ಸರಿಸುಮಾರು 17.35 ಕೋಟಿ ರೂ. ನಷ್ಟವಾಗಿದೆ ಎಂದು ವರದಿಯಾಗಿದೆ.