ಮಿನಿ ವಿಶ್ವಕಪ್ ಖ್ಯಾತಿಯ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಬೀಗಿರುವ ಟೀಂ ಇಂಡಿಯಾ ಆಟಗಾರರು ಇದೀಗ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ಗೆ ಸಜ್ಜಾಗುತ್ತಿದ್ದಾರೆ. 18ನೇ ಆವೃತ್ತಿಯ ಐಪಿಎಲ್ ಇದೇ ತಿಂಗಳ ಈಗ ಮಾರ್ಚ್ 22 ರಿಂದ ಪ್ರಾರಂಭವಾಗುತ್ತಿದೆ. ಈ ಆವೃತ್ತಿಯ ಮೊದಲ ಪಂದ್ಯ ಎರಡು ಬಲಿಷ್ಠ ತಂಡಗಳಾದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಲಿದೆ.
ಈ ಪಂದ್ಯಕ್ಕೆ ಈಗಾಗಾಲೇ ಸಾಕಷ್ಟು ಕ್ರೇಜ್ ಹೆಚ್ಚಿದೆ. ಈ ನಡುವೆ ಐಪಿಎಲ್ನ ಮತ್ತೆರಡು ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಟಿಕೆಟ್‌ಗಳ ಬಗ್ಗೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಉಭಯ ತಂಡಗಳ ಕದನದ ಟಿಕೆಟ್ ಬೆಲೆ ಕಾಳಸಂತೆಯಲ್ಲಿ 1 ಲಕ್ಷ ರೂಗಳಿಗೆ ಸಮೀಪಿಸಿದೆ ಎಂದು ವರದಿಯಾಗಿದೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಸಿಎಸ್‌ಕೆ ಪಂದ್ಯಗಳ ಲೋವರ್ ಸ್ಟ್ಯಾಂಡ್ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಹತ್ತು ಪಟ್ಟು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ವಾಸ್ತವವಾಗಿ ಸಿಎಸ್‌ಕೆ ತನ್ನ ತವರಿನ ಪಂದ್ಯಗಳಿಗೆ ಅಧಿಕೃತ ಟಿಕೆಟ್‌ಗಳ ಮಾರಾಟವನ್ನು ಇನ್ನೂ ಪ್ರಾರಂಭಿಸಿಲ್ಲ. ಆದಾಗ್ಯೂ ಈ ಎರಡು ತಂಡಗಳ ನಡುವಿನ ಪಂದ್ಯದ ಟಿಕೆಟ್ ಬೆಲೆಯನ್ನು ಭಾರಿ ಮೊತ್ತಕ್ಕೆ ಏರಿಸಲಾಗಿದೆ.
ಟಿಕೆಟ್ ಮರುಮಾರಾಟ ವೆಬ್‌ಸೈಟ್ ವಿಯಾಗೋಗೋ ಪ್ರಕಾರ, ಸಿಎಸ್‌ಕೆ vs ಮುಂಬೈ ಇಂಡಿಯನ್ಸ್ ಪಂದ್ಯದ ಕೆಎಂಕೆ ಲೋವರ್ ಸ್ಟ್ಯಾಂಡ್ ಟಿಕೆಟ್‌ಗಳ ಬೆಲೆ 85,380 ರೂ. ತಲುಪಿದೆ. ಈ ಸ್ಟ್ಯಾಂಡ್‌ಗೆ 84 ಟಿಕೆಟ್‌ಗಳು ಲಭ್ಯವಿದ್ದು, ಇದರ ಆರಂಭಿಕ ಬೆಲೆ 12,512 ರೂ. ಆಗಿದೆ. ಆದರೆ ಕಾಳಸಂತೆಯಲ್ಲಿ ಈ ಸ್ಟ್ಯಾಂಡ್ನ ಟಿಕೆಟ್ ಬೆಲೆಯನ್ನು 85,380 ರೂ.ಗೆ ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ.
ವಾಸ್ತವವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ತವರಿನಲ್ಲಿ ಒಟ್ಟು 6 ಪಂದ್ಯಗಳನ್ನು ಆಡಲಿದೆ. ಈಗಾಗಲೇ ಸಿಎಸ್ಕೆಯ ತವರು ಪಂದ್ಯಗಳ ಟಿಕೆಟ್‌ಗಳು ಪ್ರಸ್ತುತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಆದರೆ ಮಾರ್ಚ್ 28 ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ಟಿಕೆಟ್‌ಗಳನ್ನು ಮಾತ್ರ ಇನ್ನೂ ಮಾರಾಟಕ್ಕಿಟ್ಟಿಲ್ಲ.