ಎಲ್ಲಿಸ್ ಪೆರ್ರಿ ರೆಕಾರ್ಡ್ ಉಡೀಸ್: WPLನಲ್ಲಿ ಹೊಸ ಇತಿಹಾಸ ರಚಿಸಿದ ನ್ಯಾಟ್
Womens Premier League 2025: ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-3 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮೂರು ತಂಡಗಳು ಪ್ಲೇಆಫ್ಗೆ ಪ್ರವೇಶಿಸಿದ್ದು, ಅದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನೇರವಾಗಿ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಇನ್ನು ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡ ಇಂದು (ಮಾ.13) ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
Updated on: Mar 13, 2025 | 11:09 AM

ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಆಟಗಾರ್ತಿ ನ್ಯಾಟ್ ಸಿವರ್-ಬ್ರಂಟ್ ಹೊಸ ಇತಿಹಾಸ ರಚಿಸಿದ್ದಾರೆ. ಅದು ರನ್ ರಾಶಿಯನ್ನು ಪೇರಿಸುವ ಮೂಲಕ ಎಂಬುದು ವಿಶೇಷ. WPL ಸೀಸನ್-3 ರ ಕೊನೆಯ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಸಿವರ್ ಬ್ರಂಟ್ 35 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 69 ರನ್ ಬಾರಿಸಿದ್ದರು.

ಈ 69 ರನ್ಗಳೊಂದಿಗೆ ನ್ಯಾಟ್ ಸಿವರ್-ಬ್ರಂಟ್ ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ 400+ ರನ್ಗಳನ್ನು ಕಲೆಹಾಕಿದ್ದಾರೆ. ಈ ಮೂಲಕ WPL ಇತಿಹಾಸದಲ್ಲೇ ಒಂದೇ ಸೀಸನ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆಯನ್ನು ಸಿವರ್ ಬ್ರಂಟ್ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಹೆಸರಿನಲ್ಲಿತ್ತು. 2024ರ WPL ನಲ್ಲಿ ಪೆರ್ರಿ 347 ರನ್ ಬಾರಿಸಿ ಈ ದಾಖಲೆ ಬರೆದಿದ್ದರು. ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ 8 ಪಂದ್ಯಗಳಿಂದ ಪೆರ್ರಿ 372 ರನ್ ಬಾರಿಸಿ ತನ್ನದೇ ದಾಖಲೆಯನ್ನು ಮುರಿದಿದ್ದರು.

ಆದರೀಗ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ನ್ಯಾಟ್ ಸಿವರ್-ಬ್ರಂಟ್ 8 ಪಂದ್ಯಗಳಿಂದ ಒಟ್ಟು 416 ರನ್ ಕಲೆಹಾಕಿದ್ದಾರೆ. ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಒಂದೇ ಸೀಸನ್ನಲ್ಲಿ ಅತೀ ಹೆಚ್ಚು ರನ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಸದ್ಯ ಮುಂಬೈ ಇಂಡಿಯನ್ಸ್ ತಂಡವು ಎಲಿಮಿನೇಟರ್ ಸುತ್ತಿಗೆ ಪ್ರವೇಶಿಸಿದ್ದು, ಈ ಪಂದ್ಯದಲ್ಲಿ ನ್ಯಾಟ್ ಸಿವರ್-ಬ್ರಂಟ್ ಅಬ್ಬರಿಸಿ 84 ರನ್ ಕಲೆಹಾಕಿದರೆ ಆರೆಂಜ್ ಕ್ಯಾಪ್ನೊಂದಿಗೆ ಮತ್ತೊಂದಷ್ಟು ದಾಖಲೆಗಳನ್ನು ತಮ್ಮದಾಗಿಸಿಕೊಳ್ಳಬಹುದು. ಹೀಗಾಗಿ ಇಂದು ನಡೆಯಲಿರುವ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸಿವರ್-ಬ್ರಂಟ್ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಕಾದು ನೋಡೋಣ.



















