ಡೇವಿಡ್ ಮಿಲ್ಲರ್ ಆರ್ಭಟಕ್ಕೆ ಪಾಕ್ ಪಡೆ ತತ್ತರ
South Africa vs Pakistan: ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ ನಲ್ಲೇ ಪಾಕಿಸ್ತಾನ್ ತಂಡ ಮುಗ್ಗರಿಸಿದೆ. ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆತಿಥೇಯರು 11 ರನ್ ಗಳ ಗೆಲುವು ದಾಖಲಿಸಿ, ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.
1 / 5
ಪಾಕಿಸ್ತಾನ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ರೋಚಕ ಜಯ ಸಾಧಿಸಿದೆ. ಡರ್ಬನ್ನ ಕಿಂಗ್ಸ್ ಮೀಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ತಂಡವು ನಿರೀಕ್ಷಿತ ಆರಂಭ ಪಡೆಯಲಿಲ್ಲ.
2 / 5
ಆರಂಭಿಕರಾಗಿ ಕಣಕ್ಕಿಳಿದ ರಾಸ್ಸಿ ವ್ಯಾನ್ ಡರ್ ಡುಸ್ಸೆನ್ (0) ಶೂನ್ಯಕ್ಕೆ ಔಟಾದರೆ, ರೀಝ ಹೆಂಡ್ರಿಕ್ಸ್ ಕೇವಲ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಮ್ಯಾಥ್ಯೂ ಬ್ರೀಟ್ಝ್ಕ್ 8 ರನ್ ಗಳಿಸಲಷ್ಟೇ ಶಕ್ತರಾದರು. ಈ ಮೂರು ವಿಕೆಟ್‌ಗಳೊಂದಿಗೆ ಪಾಕ್ ತಂಡ ಆರಂಭಿಕ ಯಶಸ್ಸು ಪಡೆಯಿತು.
3 / 5
ಈ ಹಂತದಲ್ಲಿ ಕಣಕ್ಕಿಳಿದ ಡೇವಿಡ್ ಮಿಲ್ಲರ್ ಸೌತ್ ಆಫ್ರಿಕಾ ತಂಡಕ್ಕೆ ಆಸರೆಯಾದರು. ಪಾಕ್ ಬೌಲರ್‌ಗಳ ಮಾರಕ ದಾಳಿಗೆ ಸಿಡಿಲಬ್ಬರದ ಮೂಲಕ ಉತ್ತರ ನೀಡಿದ ಮಿಲ್ಲರ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ ಗಳ ಸುರಿಮಳೆಗೈದರು.
4 / 5
ಪರಿಣಾಮ ಡೇವಿಡ್ ಮಿಲ್ಲರ್ ಬ್ಯಾಟ್ ನಿಂದ 8 ಭರ್ಜರಿ ಸಿಕ್ಸ್ ಹಾಗೂ 4 ಫೋರ್ ಗಳು ಮೂಡಿಬಂದವು. ಈ ಸಿಕ್ಸ್-ಫೋರ್ ಗಳೊಂದಿಗೆ ಕೇವಲ 40 ಎಸೆತಗಳಲ್ಲಿ 82 ರನ್ ಚಚ್ಚಿದ ಮಿಲ್ಲರ್ ಸೌತ್ ಆಫ್ರಿಕಾ ತಂಡದ ಮೊತ್ತ 20 ಓವರ್‌ಗಳಲ್ಲಿ 183/9 ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದರು.
5 / 5
184 ರನ್ಗಳ ಕಠಿಣ ಗುರಿ ಪಡೆದ ಪಾಕಿಸ್ತಾನ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಬಾಬರ್ ಆಝಂ (0) ಸೊನ್ನೆ ಸುತ್ತಿ ಪೆವಿಲಿಯನ್ ಗೆ ಮರಳಿದರೆ, ನಾಯಕ ಮೊಹಮ್ಮದ್ ರಿಝ್ವಾನ್ 62 ಎಸೆತಗಳಲ್ಲಿ 74 ಬಾರಿಸಿದರು. ಅತ್ತ ಅಂತಿಮ ಓವರ್‌ಗಳ ವೇಳೆ ಅತ್ಯುತ್ತಮ ದಾಳಿ ಸಂಘಟಿಸಿದ ಸೌತ್ ಆಫ್ರಿಕಾ ತಂಡವು ಪಾಕ್ ಪಡೆಯನ್ನು 172/8 ರನ್ಗಳಿಗೆ ನಿಯಂತ್ರಿಸಿ 11 ರನ್ಗಳ ರೋಚಕ ಜಯ ಸಾಧಿಸಿತು.